ಚಿಕ್ಕೋಡಿ (ಬೆಳಗಾವಿ): ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಧರಿಸಿದ್ದ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಹಲವು ಪ್ರಭಾವಿಗಳ ಮನೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪೆಂಡೆಂಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಮಾಜಿ ಡಿಸಿಎಂ ಹಾಗೂ ಅಥಣಿ ತಾಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕ ಲಕ್ಷ್ಮಣ್ ಸವದಿ ಪುತ್ರನ ಕೊರಳಿನಲ್ಲೂ ಹುಲಿ ಉಗುರು ಹೋಲುವಂತಹ ಲಾಕೆಟ್ ಅನ್ನು ಹಾಕಿಕೊಂಡಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮದುವೆ ಸಂದರ್ಭದಲ್ಲಿ ಹುಲಿ ಉಗುರಿನ ರೀತಿ ಇರುವ ಲಾಕೆಟ್ ಅನ್ನು ಸವದಿ ಪುತ್ರ ಸುಮಿತ್ ಸವದಿ ಅವರು ಕೊರಳಲ್ಲಿ ಧರಿಸಿದ್ದರು. ಜನವರಿ 24ರಂದು ಬೆಳಗಾವಿಯಲ್ಲಿ ಮದುವೆ ಸಮಾರಂಭ ನಡೆದಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಅಥಣಿ ವಲಯ ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ ಈಟಿವಿ ಭಾರತ ಜೊತೆ ದೂರವಾಣಿ ಮೂಲಕ ಮಾತನಾಡಿ, ”ನನ್ನ ಗಮನಕ್ಕೆ ಈ ವಿಷಯ ಬಂದಿದೆ. ಕಾನೂನು ಪ್ರಕಾರ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.
ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಪ್ರತಿಕ್ರಿಯಿಸಿ, ”ಸುಮಿತ್ ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಫೋಟೋ ವೈರಲಾಗಿದೆ. ನನ್ನ ಸಹೋದರ ಬಳಿ ಇರೋದು ಪ್ಲಾಸ್ಟಿಕ್ನಿಂದ ತಯಾರಿಸಿದ ಹುಲಿ ಉಗುರು. ಬಂಗಾರದ ಸರ ಇದ್ದು, ಹುಲಿ ಉಗುರು ಮಾದರಿಯಂತೆ ಕಾಣುತ್ತದೆ. ಆದ್ರೆ ಅದು ಪ್ಲಾಸ್ಟಿಕ್‌ನದ್ದು, ಮದುವೆ ಸಮಾರಂಭದಲ್ಲಿ ಸುಮಿತ್ ಗೆಳೆಯರು ಉಡುಗೊರೆ ಕೊಟ್ಟಿದ್ದರು. ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ ಮಾಡುತ್ತೇವೆ. ಕಾನೂನಿನಿಗಿಂತ ಯಾರೂ ದೊಡ್ಡವರಲ್ಲ. ತನಿಖೆಗೆ ಸಹಕರಿಸುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಹುಲಿ ಉಗುರು ಎಂದು ಧರಿಸುವುದು ಒಂದು ರೀತಿ ಶೋಕಿ. ಆದರೆ, ನನ್ನ ಸಹೋದರನ ಬಳಿರುವುದು ಅಸಲಿ ಹುಲಿ ಉಗುರು ಅಲ್ಲ, ಪ್ಲಾಸ್ಟಿಕ್ನಿಂದ ಮಾಡಿರುವ ಹುಲಿ ಉಗುರಿನ ಆಕೃತಿ ಆಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು” ಎಂದು ಹೇಳಿದರು.
Laxmi News 24×7