ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ಪುತ್ರ ವ್ಯಾಮೋಹ ಇರುವುದು ಸಾಬೀತಾಗಿದೆ. ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಕಾದು ನೋಡಿ ಎಂದು ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಚಾಟಿತರಾದ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಬೆನ್ಸನ್ ಟೌನ್‌ನಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜೆಡಿಎಸ್ ನಾಯಕರಿಗೆ ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವ ಅಧಿಕಾರ ಇಲ್ಲ. ಕಾರ್ಯಕಾರಿ ಸಮಿತಿಯ 2/3ನೇ ಸದಸ್ಯರ ಅನುಮತಿ ಪಡೆದು ಮೊದಲು ನನಗೆ ನೊಟೀಸ್ ಕೊಡಬೇಕು. ನಾನು ಚುನಾವಣಾ ಆಯೋಗದಲ್ಲಿ ಜೆಡಿಎಸ್ ವರಿಷ್ಠರ ನಿರ್ಧಾರವನ್ನು ಪ್ರಶ್ನೆ ಮಾಡುತ್ತೇನೆ. ಇವತ್ತಿನವರೆಗೂ ದೇವೇಗೌಡರನ್ನು ನಾನು ನನ್ನ ತಂದೆ ಸಮಾನರು ಅಂದುಕೊಂಡಿದ್ದೆ. ನನ್ನ ವಿಧಾನಪರಿಷತ್ ಸ್ಥಾನ ಬಿಟ್ಟು ನಿಮ್ಮ ಬಳಿ ಬಂದೆ ಎಂದು ಬೇಸರ ವ್ಯಕ್ತಪಡಿಸಿದರು.
“ಸಿದ್ದರಾಮಯ್ಯಗೆ ಬೈಯ್ಯುತ್ತಿಲ್ಲವೆಂದು ದೇವೇಗೌಡರಿಗೆ ಬೇಸರ”: ನಾನು ಸಿದ್ದರಾಮಯ್ಯರನ್ನು ಬೈಯ್ಯುತ್ತಿಲ್ಲವೆಂದು ದೇವೇಗೌಡರಿಗೆ ಬೇಸರ ಇದೆ. ಸುಮ್ಮಸುಮ್ಮನೆ ನಾನ್ಯಾಕೆ ಬೈಯ್ಯಲಿ?. ಸಿದ್ದರಾಮಯ್ಯ ಜತೆ ನನಗೆ ಯಾವುದೇ ವೈಷಮ್ಯ ಇಲ್ಲ. ಅವರು ಅವರ ಪಾಡಿಗೆ ಅಧಿಕಾರ ಮಾಡುತ್ತಿದ್ದಾರೆ. ನನಗೆ ಕಾಂಗ್ರೆಸ್ ಬಿಟ್ಟಿದ್ದು ತಪ್ಪು ಅನಿಸಿಲ್ಲ. ನಾನು ಪ್ರಧಾನಿ ಮೋದಿಗೂ ಬೈದಿಲ್ಲ ಎಂದು ಸಿ.ಎಂ.ಇಬ್ರಾಹಿಂ ತಿಳಿಸಿದರು.
“ಚುನಾವಣಾ ಆಯೋಗದಲ್ಲಿ ಪ್ರಶ್ನಿಸುವೆ”: ನನ್ನ ಮುಂದಿನ ನಡೆ ಜನತಾದಳ. ಜನತಾ ದಳದ ರಾಜ್ಯ ಘಟಕವನ್ನು ವಿಸರ್ಜನೆ ಮಾಡುವುದಕ್ಕೆ ಆಗಲ್ಲ. ಚುನಾವಣಾ ಆಯೋಗದಲ್ಲಿ ಪ್ರಶ್ನೆ ಮಾಡುತ್ತೇನೆ. ನಿಜವಾದ ಜನತಾ ದಳ ನಮ್ಮದೇ. ಬಹುತೇಕ ಶಾಸಕರು ನಮ್ಮ ಜತೆ ಇದ್ದಾರೆ. ಸಮಯ, ಸಂದರ್ಭ ಬಂದಾಗ ಶಾಸಕರ ಸಭೆ ಕರೆಯುತ್ತೇನೆ. ಶಾಸಕರನ್ನು ಎಲ್ಲ ಬಲಗಳಿಂದಲೂ ಹೆದರಿಸಿಕೊಂಡು ನಾಯಕರು ಇಟ್ಟುಕೊಂಡಿದ್ದಾರೆ ಎಂದು ಕಿಡಿಕಾರಿದರು.