ಬೆಂಗಳೂರು: 2023-24 ಬಜೆಟ್ ವರ್ಷದ ಅರ್ಧ ವರ್ಷ ಕಳೆದಿದೆ.
ಹೊಸ ಕಾಂಗ್ರೆಸ್ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿದಿದ್ದು, ಪಂಚ ಗ್ಯಾರಂಟಿ ಕೇಂದ್ರೀಕೃತ ಆಡಳಿತ ನಡೆಸುತ್ತಿದೆ. ಆರ್ಥಿಕ ವರ್ಷದ ಆರು ತಿಂಗಳಲ್ಲಿ ರಾಜ್ಯದ ಬಜೆಟ್ ಅನುಷ್ಠಾನದ ಆರ್ಥಿಕ ಪ್ರಗತಿಯ ಸ್ಥಿತಿಗತಿ ಕುರಿತ ಸಂಪೂರ್ಣ ವರದಿ ಇಲ್ಲಿದೆ.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕುವರೆ ತಿಂಗಳು ಆಗಿದ್ದು, ರಾಜ್ಯಭಾರ ನಡೆಸುತ್ತಿದೆ. ಹೊಸ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳೊಂದಿಗೆ ಹೊಸ ಆಡಳಿತ ನಡೆಸುತ್ತಿದೆ. ಪಂಚ ಗ್ಯಾರಂಟಿ ಕೇಂದ್ರೀಕೃತ ಬಜೆಟ್ ಮಂಡನೆ ಮಾಡಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ವರ್ಷದ ಆರು ತಿಂಗಳುಗಳನ್ನು ಕ್ರಮಿಸಿದೆ. ತನ್ನ ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಹುವಾಗಿ ಪಂಚ ಗ್ಯಾರಂಟಿಗಳಿಗೆ ಆದ್ಯತೆ ನೀಡಿದೆ. ಪಂಚ ಗ್ಯಾರಂಟಿಗಳ ಜಾರಿಗಾಗಿ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿಯ ಬೃಹತ್ ಹೊರೆಯ ಮಧ್ಯೆ ಬರದ ಬರೆಯನ್ನೂ ಎದುರಿಸಬೇಕಾಗಿದೆ. ಪಂಚ ಗ್ಯಾರಂಟಿ, ಬರದ ಮಧ್ಯೆ ಅಭಿವೃದ್ಧಿ ಕಾಯ್ದುಕೊಳ್ಳುವುದರೊಂದಿಗೆ ಸಮತೋಲಿತ ಬಜೆಟ್ ಅನುಷ್ಠಾನ ಮಾಡುವ ಸವಾಲು ಸಿದ್ದರಾಮಯ್ಯ ಸರ್ಕಾರದ ಮೇಲಿದೆ. ಈಗಾಗಾಲೇ ಬಜೆಟ್ ವರ್ಷದ ಆರು ತಿಂಗಳು ಕಳೆದಿದೆ. ಆರು ತಿಂಗಳಲ್ಲಿ ರಾಜ್ಯ ಸರ್ಕಾರದ ಬಜೆಟ್ ಅನುಷ್ಠಾನದ ಇಲಾಖಾವಾರು ಆರ್ಥಿಕ ಪ್ರಗತಿಯ ಸ್ಥಿತಿಗತಿಯನ್ನು ತಿಳಿದುಕೊಳ್ಳೋಣ ಬನ್ನಿ…
ಅರ್ಧ ಬಜೆಟ್ ವರ್ಷದಲ್ಲಿ ಶೇ.31.43 ಪ್ರಗತಿ: ಕೆಡಿಪಿ ಪ್ರಗತಿ ಅಂಕಿ – ಅಂಶದ ಪ್ರಕಾರ, 2023-24 ಬಜೆಟ್ ವರ್ಷದ ಆರು ತಿಂಗಳಲ್ಲಿ ಇಲಾಖಾವಾರು ಒಟ್ಟು 31.43% ಆರ್ಥಿಕ ಪ್ರಗತಿ ಕಂಡಿದೆ. ಈ ಬಾರಿ ಎಲ್ಲಾ ಇಲಾಖೆಗಳಿಗೆ ಒಟ್ಟು 2,96,853.63 ಕೋಟಿ ರೂ. ಬಜೆಟ್ ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಸೆಪ್ಟೆಂಬರ್ ವರೆಗೆ ಒಟ್ಟು 1,11,854.48 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಸೆಪ್ಟೆಂಬರ್ ವರೆಗೆ ಒಟ್ಟು 93,304.81 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆ ಮೂಲಕ ಒಟ್ಟು ಹಂಚಿಕೆ ಎದುರು ಶೇ 31.43ರಷ್ಟು ಪ್ರಗತಿ ಕಾಣಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ ಇಲಾಖಾವಾರು ಆರ್ಥಿಕ ಪ್ರಗತಿ ಉತ್ತಮವಾಗಿದೆ. ಕಳೆದ ಬಾರಿ ಈ ಅವಧಿಗೆ ಶೇ 27ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿತ್ತು.
ಶೇ. 20ಕ್ಕಿಂತಲೂ ಕಡಿಮೆ ಆರ್ಥಿಕ ಪ್ರಗತಿ ಕಂಡ ಇಲಾಖೆಗಳು: ಮೂಲಭೂತ ಸೌಕರ್ಯ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಯುವ ಸಬಲೀಕರಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಶೇ. 20ಕ್ಕಿಂತಲೂ ಕಡಿಮೆ ಆರ್ಥಿಕ ಪ್ರಗತಿ ಕಂಡಿದೆ.