ಮೈಸೂರು: ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ನಗರದ ಟೌನ್‌ಹಾಲ್‌ನಲ್ಲಿ ಇಂದು ಮಹಿಷ ಉತ್ಸವ ಸಮಿತಿಯವರು ಮಹಿಷ ದಸರಾ ಆಚರಿಸಿದರು. ಈ ಸಂದರ್ಭದಲ್ಲಿ ಹಲವು ಮುಖಂಡರು ಮಾತನಾಡಿ, ಮಹಿಷಾಸುರನ ಇತಿಹಾಸ ಹಾಗೂ ಮಹಿಷ ದಸರಾಗೆ ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದರು.
ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ನಗರದ ಟೌನ್‌ಹಾಲ್‌ನಲ್ಲಿ ಉತ್ಸವ ಸಮಿತಿ ಮಹಿಷ ದಸರಾ ಆಚರಿಸಿತು. ಟೌನ್‌ಹಾಲ್ ಮುಂಭಾಗ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಈ ವೇದಿಕೆಯಲ್ಲಿ ಮಹಿಷನ ಪ್ರತಿಮೆ ಇಟ್ಟು, ಪುಷ್ಪಾರ್ಚನೆ ಮಾಡಿದರು. ಜ್ಞಾನ ಪ್ರಕಾಶ ಸ್ವಾಮೀಜಿ, ಇತಿಹಾಸ ತಜ್ಞ ಪ್ರೊ.ಚಿಕ್ಕರಂಗೇಗೌಡ, ಕೆ.ಎಸ್.ಭಗವಾನ್ ಮಹಿಷನ ಇತಿಹಾಸದ ಬಗ್ಗೆ ಮಾತನಾಡಿದರು.
ಜ್ಞಾನ ಪ್ರಕಾಶ ಸ್ವಾಮೀಜಿ, “ಇದೊಂದು ಐತಿಹಾಸಿಕ ಕ್ಷಣ. ಮಹಿಷ ಮಂಡಲವನ್ನು ಇಡೀ ರಾಜ್ಯ ಮತ್ತು ದೇಶ ತಿರುಗಿ ನೋಡುತ್ತಿದೆ. ಇದಕ್ಕೆ ಸಂಸದರಿಗೆ ಧನ್ಯವಾದ ಹೇಳುತ್ತೇನೆ. ಮಹಿಷ ಮಂಡಲ ಎಲ್ಲರಿಗೂ ತಿಳಿಯಿತು. ಇತಿಹಾಸ ಗೊತ್ತಿರದವರು ಮಹಿಷ ದೇವರಲ್ಲ ಎನ್ನುತ್ತಾರೆ” ಎಂದರು.