Breaking News

ಒಂದು ತಿಂಗಳೊಳಗೆ ಶೇ. 50ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಿ: ಸರ್ಕಾರಕ್ಕೆ ಗಡುವು ನೀಡಿದ ಕೆಂಪಣ್ಣ

Spread the love

ಬೆಂಗಳೂರು : ಒಂದು ತಿಂಗಳೊಳಗೆ ಎಲ್ಲಾ ಇಲಾಖೆಗಳಲ್ಲೂ ಕನಿಷ್ಠ ಶೇ. 50ರಷ್ಟು ಬಾಕಿ ಇರುವ ಮೊತ್ತ ಬಿಡುಗಡೆ ಮಾಡದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಗುತ್ತಿಗೆದಾರರ ಸಮಸ್ಯೆಗಳು ಬಗೆಹರಿಯುವುದಕ್ಕೆ ಬದಲಾಗಿ ಹೊಸದಾಗಿ ಮತ್ತಷ್ಟು ಸಮಸ್ಯೆಗಳು ಸೇರ್ಪಡೆಯಾಗಿವೆ. ಈಗಾಗಲೇ ಹಲವು ವರ್ಷಗಳಿಂದ ಗುತ್ತಿಗೆದಾರರು ಬಾಕಿ ಬಿಲ್ ಬಿಡುಗಡೆ, ಜಿಎಸ್​ಟಿ ಗೊಂದಲ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದೇವೆ. ಹೊಸ ಸಕಾರ ರಚನೆಯಾದಾಗ ಗುತ್ತಿಗೆದಾರರಿಗೂ ಹಲವು ಭಾಗ್ಯಗಳನ್ನ ಕರುಣಿಸಲಾಗುತ್ತದೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ ಹಳೆಯ ಸಮಸ್ಯೆಗಳ ಜೊತೆಗೆ ಹೊಸ ಸಮಸ್ಯೆಗಳು ಸೇರ್ಪಡೆಯಾಗಿವೆ. ತನಿಖೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಾಕಿ ಹಣ ತಡೆಹಿಡಿದಿದೆ. ಕೆಲವು ಇಲಾಖೆಗಳಲ್ಲಿ ಶೇ. 7ರಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಒಂದು ತಿಂಗಳಲ್ಲಿ ಶೇ.50 ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಬೇಕು” ಎಂದು ಗಡುವು ನೀಡಿದರು.

“ತಮಗೆ ಬೇಕಾದ ಕೆಲ ಗುತ್ತಿಗೆದಾರರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಗೊತ್ತಿಲ್ಲವೆಂದು ಇಂಜಿನಿಯರ್​ಗಳು ಹೇಳುತ್ತಿದ್ದಾರೆ. ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಮಾಡದಿದ್ದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇವೆ. ಪ್ರಧಾನ ಮಂತ್ರಿಗೂ ಪತ್ರ ಬರೆಯುತ್ತೇವೆ” ಎಂದು ಹೇಳಿದರು.

“ಈಗಾಗಲೇ ಹಲವಾರು ಬಾರಿ ತಮ್ಮ ಗಮನಕ್ಕೆ ತಂದಿರುವಂತೆ ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಸುಮಾರು 20 ಸಾವಿರ ಕೋಟಿ ರೂ. ಗಳಿಗೂ ಅಧಿಕ ಮೊತ್ತವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಈ ಮೊತ್ತವನ್ನು ಒಂದೇ ಬಾರಿಯಲ್ಲದಿದ್ದರೂ ಹಂತ ಹಂತವಾಗಿಯಾದರೂ ಬಿಡುಗಡೆ ಮಾಡುವ ಪ್ರಾಮಾಣಿಕತೆಯನ್ನು ಸರ್ಕಾರ ತೋರಬೇಕಾಗಿತ್ತು. ಆದರೆ ಸರ್ಕಾರ ಗುತ್ತಿಗೆದಾರರನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಗುತ್ತಿಗೆದಾರರು ಪ್ರಮುಖವಾಗಿ ಕೆಲಸ ನಿರ್ವಹಿಸುವ ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗಳೆಲ್ಲವೂ ಹೊಸ ಸಮಸ್ಯೆಗಳನ್ನು ಸೃಷ್ಟಿ ಮಾಡಿವೆ. ಈ ಸರ್ಕಾರ ರಚನೆಯಾದ ನಂತರ ಬಾಕಿ ಮೊತ್ತವನ್ನು ಪಾವತಿಸುತ್ತಿಲ್ಲ. ತನಿಖೆಯ ಹೆಸರಿನಲ್ಲಿ ಹಣ ಪಾವತಿಯಾಗದಂತೆ ತಡೆ ಹಿಡಿಯಲಾಗಿದೆ”.

“ಸರ್ಕಾರವೇ ಮಾಡಿರುವ ನಿಯಮಗಳ ಪ್ರಕಾರ, ಕಾಮಗಾರಿಗಳಿಗೆ ಒಂದು ವರ್ಷದ ಒಪ್ಪಂದ ಮಾತ್ರ ಇರುತ್ತದೆ. ಆದರೆ ಸರ್ಕಾರ ಮೂರು ವರ್ಷದ ತನಿಖೆ ನಡೆಸುವುದಾಗಿ ಹೇಳುತ್ತಿದೆ. ಇದು ಹೇಗೆ ಸಾಧ್ಯ? ಒಂದು ವರ್ಷದಿಂದೀಚೆಗಿನ ಕಾಮಗಾರಿಗಳ ಬಾಕಿ ಮೊತ್ತವನ್ನು ತಡೆ ಹಿಡಿದು ತನಿಖೆ ಮುಗಿದ ನಂತರವೇ ನೀಡಲು ಅಭ್ಯಂತರವಿಲ್ಲ. ಆದರೆ ಮೂರ‍್ನಾಲ್ಕು ವರ್ಷಗಳ ಬಾಕಿ ಬಿಲ್ ತಡೆ ಹಿಡಿಯುವುದು ಯಾವ ನ್ಯಾಯ? ಎಂದು ಕೇಳಲೇಬೇಕಾಗುತ್ತದೆ. ಕೆಲವು ಇಲಾಖೆಗಳಲ್ಲಿ ಕೇವಲ ಶೇ.7ರಷ್ಟು ಬಿಲ್ ಮೊತ್ತವನ್ನು ಪಾವತಿ ಮಾಡಲಾಗುತ್ತಿದೆ” ಎಂದರು.

“ಅಂದರೆ ಒಂದು ಕೋಟಿ ರೂಪಾಯಿ ಕಾಮಗಾರಿಗೆ ಕೇವಲ ರೂ. 7 ಲಕ್ಷ ಗುತ್ತಿಗೆದಾರರು ಶೇ.18 ರಷ್ಟು ಜಿಎಸ್​ಟಿ ತುಂಬಬೇಕಾಗುತ್ತದೆ. ಉಳಿದ ಶೇ.11 ರಷ್ಟು ಹಣವನ್ನು ಮತ್ತೆ ಎಲ್ಲಿಂದ ತರುವುದು. ಗುತ್ತಿಗೆದಾರರ ಬಳಿ ಜಿಎಸ್​ಟಿ ಪಾವತಿಸುವಷ್ಟೂ ಹಣ ಇಲ್ಲದೆ ಒದ್ದಾಡುತ್ತಿದ್ದಾರೆ”.

“ಕೆಲವು ಇಲಾಖೆಗಳಲ್ಲಿ ಒಳಗೊಳಗೆ ತಮಗೆ ಬೇಕಾದವರಿಗೆ ಮಾತ್ರ ಬಾಕಿ ಮೊತ್ತ ಪಾವತಿಸುವ ಪರಿಪಾಠವನ್ನು ಬೆಳೆಸಿಕೊಂಡಿದೆ. ಈ ಸಂಬಂಧ ಪ್ರಶ್ನಿಸಿದರೆ ಸ್ಥಳಿಯ ಇಂಜಿನಿಯರ್ ಮತ್ತು ಅಧಿಕಾರಿಗಳಿಗೆ ಮಾಹಿತಿಯೇ ಇರುವುದಿಲ್ಲ. ನಮ್ಮ ಗಮನಕ್ಕೆ ಬಾರದೆ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರದೆ ಶಿಫಾರಸ್ಸು ತಂದವರಿಗೆ ರಾತ್ರೋರಾತ್ರಿ ಚೆಕ್ ನೀಡಿದ ಉದಾಹರಣೆಗಳಿವೆ. ನಾವು ನಿಸ್ಸಹಾಯಕರು ಎಂದು ಸ್ಥಳೀಯ ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ. ಇಲಾಖೆಯ ಮುಖ್ಯಸ್ಥರು ವ್ಯವಸ್ಥಾಪಕ ನಿರ್ದೇಶಕರು. ಇವರಿಗೆ ಎಲ್ಲ ಅಧಿಕಾರ ಇರುತ್ತದೆ. ಆದರೆ ವ್ಯವಸ್ಥಾಪಕ ನಿರ್ದೇಶಕರೂ ನಮಗೆ ಅಧಿಕಾರ ಇಲ್ಲ. ಸಚಿವರೊಂದಿಗೆ ಮಾತನಾಡಿ ಎಂದು ಹೇಳುತ್ತಾರೆ ಎಂದರೆ ನಾವು ಯಾರ ಬಳಿ ಕಷ್ಟವನ್ನು ತೋಡಿಕೊಳ್ಳಬೇಕು” ಎಂದು ಪ್ರಶ್ನಿಸಿದರು.

“ಇನ್ನು ಮೂರು ಮತ್ತು ನಾಲ್ಕನೇ ದರ್ಜೆ ಗುತ್ತಿಗೆದಾರರ ಕಷ್ಟ ಯಾವ ಶತ್ರುವಿಗೂ ಬೇಡ ಅನ್ನಿಸುತ್ತದೆ. ಅವರು ಕೆಲಸ ನಿರ್ವಹಿಸುವುದೇ ಕೆಲವೇ ಲಕ್ಷ ರೂಪಾಯಿಗಳ ಕಾಮಗಾರಿ. ಆ ಹಣವನ್ನೂ ಬ್ಯಾಂಕ್, ಖಾಸಗಿ ಲೇವಾದೇವಿಗಾರರು, ಮತ್ತು ಆಸ್ತಿ ಅಡವಿಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿರುತ್ತಾರೆ. ಮೂರು ನಾಲ್ಕು ವರ್ಷ ಬಿಲ್ ಪಾವತಿಸದಿದ್ದರೆ ಏನು ಮಾಡಬೇಕು? ಅದೆಷ್ಟೋ ಗುತ್ತಿಗೆದಾರರು ಊರು ಬಿಟ್ಟಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದಾರೆ. ಈ ನೋವನ್ನು ಯಾರಲ್ಲಿ ಹೇಳಿಕೊಳ್ಳಬೇಕು?. ಯಾವುದೇ ಇಲಾಖೆಯಲ್ಲಿ ಜ್ಯೇಷ್ಠತೆಯನ್ನು ಪಾಲಿಸುತ್ತಿಲ್ಲ. ಆಗಲೇ ಹೇಳಿದಂತೆ ತಮಗೆ ಬೇಕಾದವರಿಗೆ ರಾತ್ರೋರಾತ್ರಿ ಚೆಕ್​ಗಳನ್ನು ನೀಡಲಾಗುತ್ತಿದೆ. ಸೀನಿಯಾರಿಟಿ ಪಟ್ಟಿಯನ್ನೂ ನೀಡುತ್ತಿಲ್ಲ. ಪ್ರಶ್ನಿಸಿದರೆ ಯಥಾಪ್ರಕಾರ ಮೇಲಿನವರತ್ತ ಕೈ ತೋರಿಸಿ ಅಲ್ಲಿ ಕೇಳಿಕೊಳ್ಳಿ ಎನ್ನುತ್ತಾರೆ”.


Spread the love

About Laxminews 24x7

Check Also

5 ತಾಲೂಕುಗಳ ಶಾಲೆಗೆ ಇಂದು ರಜೆ ಘೋಷಣೆ

Spread the loveಮಂಗಳೂರು/ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್​ 29(ಶುಕ್ರವಾರ) ರಂದು ಜಿಲ್ಲೆಯ ಶಾಲೆ, ಪ್ರೌಢಶಾಲೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ