Breaking News

ಕಿತ್ತೂರು ಉತ್ಸವಕ್ಕೆ 5 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಕಳಿಸಲು ನಿರ್ಧಾರ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

Spread the love

ಬೆಳಗಾವಿ : “ಕಳೆದ ವರ್ಷ ಸರ್ಕಾರವು ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಘೋಷಿಸಿ ಎರಡು ಕೋಟಿ ರೂಪಾಯಿ ಅನುದಾನ ನೀಡಿತ್ತು.

ಅದೇ ರೀತಿ ಈ ಬಾರಿ ಐದು ಕೋಟಿ ರೂಪಾಯಿ ಅನುದಾನ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಕಿತ್ತೂರು ಉತ್ಸವದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ಐದು ಕೋಟಿ ರೂಪಾಯಿ ಅನುದಾನ ಕೋರಿ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ ಅವರು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಈ ಬಾರಿ ಕೂಡ ಕಿತ್ತೂರಿನಲ್ಲಿ ಒಂದಕ್ಕಿಂತ ಹೆಚ್ಚು ವೇದಿಕೆ ನಿರ್ಮಾಣ ಮಾಡುವುದರ ಜತೆಗೆ ಚೆನ್ನಮ್ಮಾಜಿ ತವರು ಕಾಕತಿ ಗ್ರಾಮದಲ್ಲೂ ಕೂಡ ವೇದಿಕೆ‌ ನಿರ್ಮಿಸುವ ಬಗ್ಗೆ ಚರ್ಚಿಸಲಾಗುವುದು ಎಂದರು.

ಕಿತ್ತೂರಿನಲ್ಲಿ ಅಕ್ಟೋಬರ್​ 3ರಂದು ಸಭೆ : ಕಿತ್ತೂರು ಉತ್ಸವದ ಪೂರ್ವಸಿದ್ಧತೆ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸಲು ಪ್ರತಿ ವರ್ಷದಂತೆ ಕಿತ್ತೂರಿನಲ್ಲಿ ಅಕ್ಟೋಬರ್​ 3ರಂದು ಸಂಜೆ 4 ಗಂಟೆಗೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮತ್ತೊಂದು ಸಭೆಯನ್ನು ಕರೆಯಲಾಗುತ್ತದೆ. ಈ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಮಾತನಾಡಿ, ಐದು ಕೋಟಿ ರೂಪಾಯಿ ಅನುದಾನ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಆದ್ದರಿಂದ ಕಳೆದ ಬಾರಿಯ ವೆಚ್ಚದ ಆಧಾರದ ಮೇಲೆ ಮುಂಚಿತವಾಗಿಯೇ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಳೆದ ಬಾರಿಯಂತೆ ವೀರಜ್ಯೋತಿ ಯಾತ್ರೆಯು ರಾಜ್ಯದಾದ್ಯಂತ ಸಂಚರಿಸಲು ಹಾಗೂ ಪ್ರವಾಸಿ ತಾಣಗಳಲ್ಲಿ ಕೂಡ ಸಂಚರಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಉತ್ಸವವನ್ನು ಪ್ರತಿವರ್ಷದಂತೆ ಅಚ್ಚುಕಟ್ಟಾಗಿ ಆಚರಿಸಲು ಅನುಕೂಲವಾಗುವಂತೆ ವೇದಿಕೆ, ಮೆರವಣಿಗೆ, ಊಟೋಪಾಹಾರ, ವಸ್ತುಪ್ರದರ್ಶನ ಹೀಗೆ ಎಲ್ಲ ಉಪ ಸಮಿತಿಗಳನ್ನು ರಚಿಸಲಾಗುವುದು. ಸಮಿತಿ ರಚನೆಯಾದ ಕೂಡಲೇ ಸದಸ್ಯರು ಕಾರ್ಯಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಕುಸ್ತಿ, ಕ್ರೀಡೆ, ವಿವಿಧ ಸಾಂಸ್ಕೃತಿಕ‌ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಕಿತ್ತೂರು ಉತ್ಸವದ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು. ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನದಿಂದ ಸ್ವಾತಂತ್ರ್ಯ ದಿನಾಚರಣೆ ಮಕ್ಕಳಿಗೆ ದೇಶಾಭಿಮಾನ ಬೆಳೆಸಿ: ಸಂತೋಷ್ ಮಠಪತಿ

Spread the love ಬೆಳಗಾವಿ: ಪ್ರಾಥಮಿಕ ಹಂತದಲ್ಲೆ ಮಕ್ಕಳಿಗೆ ದೇಶಾಭಿಮಾನ ಬೆಳೆಸಿ, ದೇಶದ ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ದಾರಿ ಪೋಷಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ