ಬೆಳಗಾವಿ : ಹೆಚ್ ಡಿ ಕುಮಾರಣ್ಣ ಅವರು ಬಿಸಿಲು ಬಂದಾಗ ಛತ್ರಿ ಹಿಡಿಯುತ್ತಾರೆ ಎಂದು ಶಾಸಕ ಲಕ್ಷ್ಮಣ್ ಸವದಿ ಅವರು ಮಾಜಿ ಸಿಎಂ ಕುಮಾರಸ್ವಾಮಿ ಕುರಿತು ವ್ಯಂಗ್ಯವಾಡಿದರು.
ಐಎನ್ಡಿಐಎ ಒಕ್ಕೂಟದ ಓಲೈಕೆಗೆ ರಾಜ್ಯ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಸವದಿ ಅವರು ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಕುಮಾರಣ್ಣ ಬಿಸಿಲು ಬಂದಾಗ ಛತ್ರಿ ಹಿಡಿಯುತ್ತಾರೆ. “ಹೆಂಗೆಂಗ್ ಬಿಸಿಲು ಬರ್ತದೆ, ಹಂಗಂಗ್ ಕೊಡೆ ಹಿಡಿತಾರೆ”. ರಾಜಕಾರಣದ ಜಾಣತನ ಅವರಲ್ಲಿದೆ. ಅವರು ಯಾರ್ ಯಾರನ್ನು ಯಾವ ರೀತಿ ಟೀಕೆ ಮಾಡಿದ್ದರೋ ಗೊತ್ತಿದೆ. ಇಂದು ಅವರನ್ನೇ ಅಪ್ಪಿಕೊಳ್ಳುತ್ತಿದ್ದಾರೆ. ರಾಜಕಾರಣದಲ್ಲಿ ಕುಮಾರಣ್ಣ ಜಾಣ್ಮೆ ಪ್ರದರ್ಶಿಸಿ ಕೊಡೆ ಹಿಡಿಯುತ್ತಾರೆ ಎಂದು ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಕುಟುಕಿದರು.
ಬೊಮ್ಮಾಯಿ ಹೇಳಿಕೆ ವಿಚಾರ : ಕಾವೇರಿ ನೀರು ಹರಿಸುತ್ತಿರುವುದು ಸರ್ಕಾರದ ವೈಫಲ್ಯ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಬೊಮ್ಮಾಯಿಯವರು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಈ ಮಾತನ್ನು ಹೇಳುತ್ತಿದ್ದಾರೆ. ಕಾವೇರಿ ನೀರಿನ ವಿಚಾರ ಅನೇಕ ವರ್ಷಗಳಿಂದ ವ್ಯಾಜ್ಯವಾಗಿದೆ. ಬೊಮ್ಮಾಯಿಯವರು ರಾತ್ರಿ ನೀರು ಬಿಟ್ಟಿದ್ದನ್ನು ಮರೆತಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಪ್ರತಿದಿನ 5000 ಕ್ಯೂಸೆಕ್ ನೀರು ಹರಿಸಬೇಕಿದ್ದು, ನಮಗೆ ಇದೊಂದು ಧರ್ಮ ಸಂಕಟ ಎದುರಾಗಿದೆ. ಒಂದು ಕಡೆ ಜನರ ರಕ್ಷಣೆ, ಇನ್ನೊಂದು ಕಡೆ ಕಾನೂನು ಪಾಲಿಸಬೇಕಾಗಿದೆ. ಸಿಎಂ ಸಿದ್ದರಾಮಯ್ಯ ಕಾನೂನು ಚೌಕಟ್ಟಿನಲ್ಲಿ ಮಾಡಬೇಕಾದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಲಕ್ಷಣ್ ಸವದಿ ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಕುಡಿಯುವ ನೀರು ಬದಲು ಪ್ರತಿ ಗ್ರಾಮ ಪಂಚಾಯಿತಿಗೆ ಸರ್ಕಾರ ಮದ್ಯದಂಗಡಿ ಕೊಡುತ್ತಿದೆ ಎಂಬ ಬೊಮ್ಮಾಯಿ ಹೇಳಿಕೆಗೆ,
ಬೊಮ್ಮಾಯಿ ಏನಾದ್ರೂ ಹೇಳಿ ಮತ್ತೆ ಪ್ರಚಾರದಲ್ಲಿ ಇರಬೇಕು ಅಂತ ಮಾಡಿದ್ದಾರೆ. ಅದಕ್ಕಾಗಿ ಏನಾದ್ರೂ ಹೇಳ್ತಾ ಇರ್ತಾರೆ. ಈಗಾಗಲೇ ವಿರೋಧ ಪಕ್ಷ ನಾಯಕನಾಗಬೇಕಿತ್ತು. ಬೊಮ್ಮಾಯಿಯನ್ನು ಬಿಟ್ಟರೆ ಬಿಜೆಪಿಯಲ್ಲಿ ಯಾರೂ ಜಾಣರಿಲ್ಲ. ವಿರೋಧ ಪಕ್ಷದ ನಾಯಕರಾಗೋಕೆ ಕೆಪ್ಯಾಸಿಟಿ ಹಾಗೂ ಬುದ್ಧಿವಂತಿಕೆ ಅವರಲ್ಲಿದೆ ಎಂದರು.
ಬಿಜೆಪಿ 66 ಸ್ಥಾನ ಪಡೆಯುತ್ತಿದ್ದಂತೆ ಬೊಮ್ಮಾಯಿ ಅವರಿಗೆ ಜಿಗುಪ್ಸೆ ಬಂದಿದೆ. ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಹೇಳಿಕೆ ಕೊಟ್ಟಿದ್ದರೇ ಸೂಕ್ತವಾಗ್ತಿತ್ತು. ಇತ್ತ ಕಡೆ ಗಮನ ಕೊಡದೆ, ಕೇಂದ್ರದ ಕಡೆ ಗಮನ ಕೊಟ್ಟು ನಾಯಕನ ಸ್ಥಾನ ಪಡೆದುಕೊಳ್ಳಲಿ ಎಂದು ಸವದಿ ಟಾಂಗ್ ಕೊಟ್ಟರು.
Laxmi News 24×7