Breaking News

ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್.. ನೀಟ್​ ಪರೀಕ್ಷೆ ಕಟ್​ ಆಫ್​ ಅಂಕ ರದ್ದು

Spread the love

ಹೈದರಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ಮೂರನೇ ಸುತ್ತಿನ ನೀಟ್ ಪಿಜಿ ವೈದ್ಯಕೀಯ ಕೌನ್ಸೆಲಿಂಗ್‌ಗೆ ಇದ್ದ ಅರ್ಹತಾ ಅಂಕಗಳು (ಕಟ್​​ ಆಫ್​) ರದ್ದುಗೊಳಿಸುವುದಾಗಿ ಘೋಷಿಸಿದೆ.

ಇದರಿಂದಾಗಿ ಪ್ರಸಕ್ತ ವರ್ಷ ನೀಟ್‌ ಪರೀಕ್ಷೆ ಬರೆಯುವ ಅಭ್ಯರ್ಥಿಗಳೆಲ್ಲರೂ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ.

ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಕ್ರಮಕ್ಕೆ ಅನುಮೋದನೆ ನೀಡಿದ್ದು, ಕಟ್​ ಆಫ್​ ಅಂಕಗಳನ್ನು ಶೂನ್ಯಕ್ಕೆ ಇಳಿಸಿದ್ದರಿಂದ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳಿಗೆ ಸ್ಪರ್ಧಿಸಲು ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ.

 

 

ಈ ಹಿಂದೆ, ನೀಟ್​ ಪಿಜಿ ಕೌನ್ಸೆಲಿಂಗ್‌ನ ಅರ್ಹತಾ ಮಾನದಂಡವು ಸಾಮಾನ್ಯ ವರ್ಗಕ್ಕೆ ಒಟ್ಟು 800 ಅಂಕಗಳಲ್ಲಿ 291 ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 257 ಅಂಕಗಳ ಕನಿಷ್ಠ ಕಟ್-ಆಫ್ ಅಂಕವನ್ನು ಕಡ್ಡಾಯಗೊಳಿಸಿತ್ತು. ಇದರಿಂದಾಗಿ ಇಷ್ಟು ಅಂಕ ಗಳಿಸಲು ವಿಫಲವಾದ ವಿದ್ಯಾರ್ಥಿಗಳು ಮೂರನೇ ಸುತ್ತಿನ ಕೌನ್ಸೆಲಿಂಗ್​ನಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಇದೀಗ ಎಲ್ಲರೂ ಕೌನ್ಸೆಲಿಂಗ್​ನಲ್ಲಿ ಭಾಗಿಯಾಗಬಹುದಾಗಿದೆ.

ಅಂಕ ರದ್ದಿನಿಂದ ಲಾಭವೇನು?: ಅರ್ಹತಾ ಕನಿಷ್ಠ ಅಂಕ ರದ್ದಾದ್ದರಿಂದ ಮೂರನೇ ಸುತ್ತಿನ ಕೌನ್ಸೆಲಿಂಗ್‌ಗೆ ಎಲ್ಲ ವಿದ್ಯಾರ್ಥಿಗಳು ತೆರಳಲಿದ್ದು, 13,000 ಕ್ಕೂ ಹೆಚ್ಚು ಖಾಲಿ ಸೀಟುಗಳಿಗೆ ಪೈಪೋಟಿ ನಡೆಯಲಿದೆ. ಇದು ಅಭ್ಯರ್ಥಿಗಳು ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳನ್ನು ಮಾಡುವ ಅವರ ಕನಸುಗಳನ್ನು ಸಾಕಾರ ಮಾಡಲಿದೆ.

 

 

ಈ ಬಗ್ಗೆ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಅಧಿಕೃತ ಸೂಚನೆ ಹೊರಡಿಸಿದ್ದು, NEET PG ಕೌನ್ಸೆಲಿಂಗ್ 2023 ಕ್ಕೆ ಅನ್ವಯವಾಗುವಂತೆ ಪಿಜಿ ಕೋರ್ಸ್‌ಗಳಿಗೆ (ವೈದ್ಯಕೀಯ/ದಂತ) ಅರ್ಹತಾ ಕಟ್​ ಆಫ್​ ಅಂಕಗಳನ್ನು ರದ್ದು ಮಾಡಲಾಗಿದೆ ಎಂದಿದೆ. ಆದರೆ, ಈ ನಿರ್ಧಾರಕ್ಕೆ ವೈದ್ಯಕೀಯ ಸಮುದಾಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಏನಿದು ಕಟ್​ ಆಫ್​ ಅಂಕ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳನ್ನು ಮಾಡುವ ಕನಸು ಇಟ್ಟುಕೊಂಡಿದ್ದ ವಿದ್ಯಾರ್ಥಿಗಳು ಬರೆಯುವ ನೀಟ್​ ಪಿಜಿ ಪರೀಕ್ಷೆಯಲ್ಲಿ ಇಂತಿಷ್ಟು ಅಂಕಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂಬ ನಿಯಮ. ನಿಗದಿಪಡಿಸಿದ ಅಂಕಗಳನ್ನು ಮುಟ್ಟುವಲ್ಲಿ ವಿದ್ಯಾರ್ಥಿ ವಿಫಲವಾದರೆ, ಅವರು ಮುಂದಿನ ಹಂತಕ್ಕೆ ಅನರ್ಹತೆ ಹೊಂದುತ್ತಿದ್ದರು. ಆ ಗೋಜಲು ಈಗ ತಪ್ಪಿದೆ.

ಕಟ್​ ಆಫ್​ ಅಂಕಗಳೇ ಅನರ್ಥ: ನೀಟ್​ ಪರೀಕ್ಷೆಯನ್ನೇ ರದ್ದು ಮಾಡಬೇಕು ಎಂದು ಪಟ್ಟು ಹಿಡಿದಿರುವ ತಮಿಳುನಾಡು ಸರ್ಕಾರ, ಕಟ್​ ಆಫ್​ ಅಂಕಗಳನ್ನು ಶೂನ್ಯಕ್ಕೆ ಇಳಿಸಿದ್ದನ್ನು ಟೀಕಿಸಿದೆ. ಈ ಬಗ್ಗೆ ಮಾತನಾಡಿರುವ ಸಿಎಂ ಎಂಕೆ ಸ್ಟಾಲಿನ್​ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿನ ಎಲಿಜಿಬಲ್​ ಅಂಕಗಳೇ ಅರ್ಥಹೀನ. ಇದರಿಂದ ಕೇವಲ ಕೋಚಿಂಗ್ ಸೆಂಟರ್‌ಗಳು ಮತ್ತು ಪರೀಕ್ಷೆಗೆ ಪಾವತಿಸುವ ಹಣ ಪೋಲಾಗಲಿದೆ. ಮೊದಲಿನಿಂದಲೂ ವಿರೋಧಿಸುತ್ತಾ ಬಂದರೂ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.


Spread the love

About Laxminews 24x7

Check Also

ಕಾಲ್ತುಳಿತದಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಕ್ರಿಕೆಟ್ ಟೂರ್ನಿ ನಡೆಸಬೇಕು ಎಂದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ

Spread the loveಬೆಂಗಳೂರು: ಕಾಲ್ತುಳಿತ ದುರಂತ ಆಗಿದೆ ಎಂಬ ಕಾರಣಕ್ಕೆ ಕ್ರಿಕೆಟ್ ಪಂದ್ಯಾವಳಿ ನಿಲ್ಲಿಸುವುದು ಪರಿಹಾರವಲ್ಲ ಎಂದು ಮಾಜಿ ಕ್ರಿಕೆಟಿಗ ಅನಿಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ