ಶಿರಸಿ: ಕನ್ನಡದ ಮೊದಲ ರಾಜಧಾನಿ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಇತಿಹಾಸವನ್ನು ಈಗ ಇಲ್ಲಿಯ ಗಿಡಮರಗಳು ಸಾರುತ್ತಿವೆ.
ಅದೂ ಡಿಜಿಟಲ್ ತಂತ್ರಜ್ಞಾನದ ಮೂಲಕ ಎಂಬುದು ವಿಶೇಷ. ಬನವಾಸಿಯ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಡಿಜಿಟಲ್ ಸ್ಪರ್ಶ ನೀಡಿರುವ ಅರಣ್ಯ ಇಲಾಖೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಬನವಾಸಿಯ ಇತಿಹಾಸವನ್ನು ತಿಳಿಸುವ ಮಾದರಿ ಕಾರ್ಯ ಕೈಗೊಂಡಿದೆ. ಕದಂಬ ನಡಿಗೆ ಎಂಬ ನೂತನ ಕಲ್ಪನೆಯನ್ನು ಜಾರಿಗೆ ತಂದಿದೆ.
ಶಿರಸಿ ತಾಲೂಕಿಗೆ ಒಳಪಡುವ ಬನವಾಸಿ ಕದಂಬರಾಳಿದ ಪ್ರದೇಶ. ಕನ್ನಡದ ಪ್ರಥಮ ರಾಜಧಾನಿ ಅಂತಲೂ ಕರೆಯುತ್ತಾರೆ. ಇದು ಐತಿಹಾಸಿಕ ಮಹತ್ವವುಳ್ಳ ಪ್ರದೇಶ. ಇಲ್ಲಿ ಸಾಕಷ್ಟು ಸಂಗತಿಗಳು ಅಡಕವಾಗಿವೆ. ಇದರಿಂದ ಅರಣ್ಯ ಇಲಾಖೆ ಹೊಸದೊಂದು ಪ್ರಯೋಗ ನಡೆಸಿ, ಇಲಾಖೆಯ ಅಡಿಯಲ್ಲಿ ಬರುವ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಡಿಜಿಟಲ್ ಸ್ಪರ್ಶ ನೀಡಿದೆ. ಅಲ್ಲಿ ಅಳವಡಿಸಿದ ಬೋರ್ಡ್ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು ಭರಪೂರ ವಿವರ ಲಭ್ಯವಾಗುತ್ತದೆ.
ಬನವಾಸಿಯಲ್ಲಿ ಅರಣ್ಯ ಇಲಾಖೆಯಿಂದ ಉದ್ಯಾನವನಕ್ಕೆ ಡಿಜಿಟಲ್ ಸ್ಪರ್ಶ2017ರಲ್ಲಿ ಆರಂಭವಾದ ಈ ಉದ್ಯಾವನಕ್ಕೆ ವಾಕಿಂಗ್ ಪಥದಂಚಿನಲ್ಲಿ 14ಕ್ಕೂ ಹೆಚ್ಚು ಬೋರ್ಡ್ಗಳನ್ನು ಅಳವಡಿಸಲಾಗಿದೆ. ಈ ಪ್ರತಿ ಬೋರ್ಡ್ಗಳಲ್ಲಿ ಕದಂಬರ ರಾಜಧಾನಿಯ ವಿಶೇಷತೆಯ ವಿವರಗಳಿವೆ. ಹೀಗೆ ಪ್ರತಿ ಬೋರ್ಡ್ಗಳನ್ನು ಓದುತ್ತ ಸಾಗಿದಂತೆ ಕೆಳಗಡೆ ಇರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಆ ವಿಷಯಗಳ ಕುರಿತ ಮಾಹಿತಿ ಖಜಾನೆಯೇ ತೆರೆದುಕೊಳ್ಳುತ್ತದೆ. ಇದರಿಂದ ಮಾಹಿತಿ ಬರೆದುಕೊಳ್ಳುವ ಅವಶ್ಯಕತೆ ಇಲ್ಲದಾಗುತ್ತದೆ. ವೆಬ್ ಪೇಜ್‌ಗಳಲ್ಲಿ ನೋಡಬೇಕಿಲ್ಲ. ಎಲ್ಲ ಮಾಹಿತಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮೂಲಕ ಮೊಬೈಲ್‌ನಲ್ಲಿ ದೊರೆಯುತ್ತದೆ. ಈ ಎಲ್ಲ ಕಾರಣದಿಂದ ಬನವಾಸಿ ವೀಕ್ಷಣೆಗೆ ಬರುವ ನಾಡಿನ ವಿವಿಧೆಡೆ ಪ್ರವಾಸಿಗರು ಈ ಉದ್ಯಾನವನಕ್ಕೆ ಬಂದು ವೀಕ್ಷಿಸುತ್ತಾರೆ. ಅಲ್ಲದೇ ಪ್ರತಿನಿತ್ಯ ಬೆಳಗ್ಗೆ ಸಂಜೆ ಸುತ್ತಮುತ್ತಲಿನವರು ಇಲ್ಲಿಯೇ ವಾಕಿಂಗ್ ಮಾಡುತ್ತಾರೆ.