ಬೆಂಗಳೂರು : ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಆರೋಪದಡಿ ಬಂಧಿತರಾಗಿರುವ 8 ಮಂದಿ ಆರೋಪಿಗಳ ವಿಚಾರಣೆಯನ್ನ ಸಿಸಿಬಿ ತನಿಖಾಧಿಕಾರಿಗಳು ಚುರುಕುಗೊಳಿಸಿದ್ದಾರೆ. ಹಾಲಶ್ರೀ ಮಠಕ್ಕೆ ಹಣ ತಲುಪಿಸುವಂತೆ ಆರೋಪಿತ ಅಭಿನವ ಹಾಲಶ್ರೀ ಚಾಲಕ ರಾಜು ಎಂಬಾತ ತನಗೆ 56 ಲಕ್ಷವನ್ನ ನೀಡಿರುವ ಬಗ್ಗೆ ಪ್ರಣವ್ ಎಂಬುವರು ಮಠಕ್ಕೆ ಹಣ ತಲುಪಿಸಿರುವ ಕುರಿತು ನಿನ್ನೆ ವಿಡಿಯೋ ಮಾಡಿದ್ದರು. ಬಳಿಕ ಸಿಸಿಬಿಗೂ ಮಾಹಿತಿ ನೀಡಿದ್ದರು. ಈ ಬಗ್ಗೆ ಕಾರ್ಯಪ್ರವೃತ್ತಗೊಂಡ ಸಿಸಿಬಿ ಹಿರೇಹಡಗಲಿಯ ಹಾಲಶ್ರೀ ಮಠಕ್ಕೆ ತೆರಳಿ 56 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮತ್ತೊಂದೆಡೆ ಆಡುಗೋಡಿಯ ಟೆಕ್ನಿಕಲ್ ಸೆಂಟರ್ನಲ್ಲಿ ವಿಚಾರಣೆ ಎದುರಿಸುತ್ತಿರುವ ಹಾಲಶ್ರೀ, ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ ಟಿಕೆಟ್ ಕೊಡಿಸುವುದಾಗಿ 1.50 ಕೋಟಿ ಹಣ ಪಡೆದಿದ್ದರು. ಈ ಪೈಕಿ 56 ಲಕ್ಷ ಹಣ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಹತ್ತಾರು ಎಕರೆಗಳನ್ನು 21 ಲಕ್ಷ ಹಣ ನೀಡಿ ಲೀಜ್‌ಗೆ ಪಡೆದುಕೊಂಡಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಬಂಧಿತ ವ್ಯಕ್ತಿಯಿಂದ 21 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಬಾಕಿ ಉಳಿದ ಹಣ ಎಲ್ಲಿದೆ? ಬೇರೆಯವರ ಮೂಲಕ ಹಣ ಹೂಡಿಕೆ ಮಾಡಲಾಗಿದೆಯಾ? ಎಂಬುದರ ಬಗ್ಗೆ ಸ್ವಾಮೀಜಿಯನ್ನು ಅಧಿಕಾರಿಗಳು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಪ್ರತಿಕ್ರಿಯಿಸಿದ್ದು, ವಂಚನೆ ಪ್ರಕರಣದಲ್ಲಿ ಈವರೆಗೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಆರೋಪಿ ಚೈತ್ರಾ ಕುಂದಾಪುರಳಿಂದ 2 ಕೋಟಿ ರೂ. ಹಣ, ಚಿನ್ನಾಭರಣ ಹಾಗೂ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ, ಹಾಲಶ್ರೀಯಿಂದ ಮಠದಲ್ಲಿ 56 ಲಕ್ಷ ಹಣ ಹಾಗೂ ಸಂಬಂಧಿತ ವ್ಯಕ್ತಿಯಿಂದ 20 ಲಕ್ಷ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಣವ್ ಪ್ರಸಾದ್, ತಿಪ್ಪೇಸ್ವಾಮಿ ಸೇರಿದಂತೆ ನಾಲ್ವರಿಗೆ ಸಿಸಿಬಿ ನೋಟಿಸ್ ನೀಡಿದ್ದು, ಇದರಂತೆ ಸದ್ಯ ಪ್ರಣವ್ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದರು.
Laxmi News 24×7