ಮೈಸೂರು: ಸುಪ್ರೀಂ ಕೋರ್ಟ್ನ ಬಗ್ಗೆ ನಮಗೆ ಗೌರವವಿದೆ. ಆದರೆ ನಮಗೆ ಮೊದಲು ನೀರು ಬೇಕು, ನಾವು ಬದುಕಬೇಕು. ಆನಂತರ ಬೇರೆಯವರಿಗೆ ನೀರು ಕೊಡಬೇಕು.
ಆದರೆ ನಮ್ಮಲ್ಲೇ ನೀರಿಲ್ಲ. ಈ ಸಂದರ್ಭದಲ್ಲಿ ನೀರು ಕೊಡಿ ಎಂದು ಹೇಳಿದರೆ ಹೇಗೆ? ಈ ಕಾವೇರಿ ನೀರಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ರೈತ ಸಂಘದ ಮುಖಂಡ ನಂಜುಂಡೇಗೌಡ ಹೇಳಿದರು.
ನಗರದ ಕಾಡಾ ಕಚೇರಿಯ ಮುಂಭಾಗ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಈಟಿವಿ ಭಾರತ ಜೊತೆ ಮಾತನಾಡಿದ ರೈತ ಸಂಘದ ಮುಖಂಡ ನಂಜುಂಡೇಗೌಡ ಅವರು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾವೇರಿ ಪ್ರಾಧಿಕಾರ ನೀಡಿರುವ ಆದೇಶದಲ್ಲಿ ಮಧ್ಯ ಪ್ರವೇಶ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದಂತೆ ಪ್ರತಿದಿನ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರನ್ನು ಬಿಡುವ ಆದೇಶ ಜಾರಿ ಮಾಡಿದೆ. ನೀರು ಹರಿಸುವ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಸ್ಥಿತಿಯ ಬಗ್ಗೆ ಮೈಸೂರಿನ ಕಾಡಾ ಕಚೇರಿಯ ಮುಂಭಾಗದಲ್ಲಿ ರೈತ ಸಂಘಟನೆಗಳ ಮುಖಂಡರುಗಳು ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ನಮ್ಮಲ್ಲಿ ವ್ಯವಸಾಯಕ್ಕೆ ನೀರಿಲ್ಲ ಎಂದು ಹೇಳಿದಾಗ ರೈತರು ಎದೆ ಮೇಲೆ ಕಲ್ಲು ಹಾಕಿಕೊಂಡು ಸುಮ್ಮನಿದ್ದರು. ಈಗ ಬೆಂಗಳೂರು, ಮೈಸೂರಿನ ಸುಮಾರು ಒಂದು ಮುಕ್ಕಾಲು ಕೋಟಿ ಜನರಿಗೆ ಪ್ರತಿನಿತ್ಯ 2 ಟಿಎಂಸಿ ನೀರು ಬೇಕು. ಮುಂದಿನ 9 ತಿಂಗಳು ಅಣೆಕಟ್ಟೆಯಲ್ಲಿ ಕುಡಿಯಲು ನೀರಿಲ್ಲ. ನಮಗೆ ಸರ್ಕಾರ 5 ಭಾಗ್ಯಗಳನ್ನ ಕೊಟ್ಟಿದೆ, ಆರನೇ ಭಾಗ್ಯ ರೈತರ ನೇಣಿನ ಭಾಗ್ಯವನ್ನು ನೀಡಲಿ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.