ಬೆಂಗಳೂರು: ಬರ, ಕಾವೇರಿ ವಿಷಯಾಂತರಕ್ಕೆ ಮೂರು ಡಿಸಿಎಂ ಹುದ್ದೆ ಚರ್ಚೆ ಹರಿಬಿಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಮೂವರು ಡಿಸಿಎಂಗಳನ್ನು ಮಾಡಲಿ. ನಾವು ಮೂವರನ್ನು ಡಿಸಿಎಂ ಮಾಡಿದ್ದೆವು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸಿಎಂಗೆ ಸವಾಲೆಸೆದಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಧ್ಯಮದರೊಂದಿಗೆ ಅವರು ಮಾತನಾಡಿದರು. ಕಾವೇರಿ, ಬರ ವಿಚಾರ ಡೈವರ್ಟ್ ಮಾಡಲು ಮೂರು ಡಿಸಿಎಂ ಹುದ್ದೆಯ ಚರ್ಚೆ ಬಿಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೆ ಎನ್ ರಾಜಣ್ಣ, ಚಲುವರಾಯಸ್ವಾಮಿ ಇವರೆಲ್ಲ ಬುದ್ಧಿವಂತರು. ರಾಜ್ಯದಲ್ಲಿ ಬರ, ಕಾವೇರಿ ಸಮಸ್ಯೆ ಬಗ್ಗೆ ಚರ್ಚೆ ಆಗಬಾರದು ಅಂತ ಡಿಸಿಎಂ ಚರ್ಚೆ ಹರಿ ಬಿಟ್ಟಿದ್ದಾರೆ. ಇವರು ದಲಿತರನ್ನು ಸಿಎಂ ಮಾಡದೇ ಮೋಸ ಮಾಡಿದವರು. ನಾನೇ ಸಿಎಂ ಆಗಬೇಕು, ಐದೂ ವರ್ಷ ನಾನೇ ಸಿಎಂ ಅಂತ ಅವರ ಆಪ್ತರಿಂದ ಸಿಎಂ ಸಿದ್ದರಾಮಯ್ಯ ಹೇಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ತಮಿಳುನಾಡಿನ ಸಿಎಂ ರೀತಿ ಮಾತನಾಡುತ್ತಿದ್ದಾರೆ: ರಾಜ್ಯದಲ್ಲಿ ಬರ ವಿಪರೀತ ಇದೆ, ಮಳೆ ಇಲ್ಲ, ಕುಡಿಯಲು ನೀರಿಲ್ಲ, ಕಾವೇರಿ ಬರಿದಾಗುತ್ತಿದೆ ಆದರೆ ನಮ್ಮ ರಾಜ್ಯದ ಸಿಎಂ ತಮಿಳುನಾಡಿನ ಸಿಎಂ ಥರ ಮಾತನಾಡುತ್ತಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ನಮ್ಮ ಬೆಳೆಗಳಿಗೆ ನೀರಿಲ್ಲ, ಆದರೂ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ಇದಕ್ಕೆ ನೀರು ಇದೆಯಾ?. ಚಲುವರಾಯಸ್ವಾಮಿ ಖುಷ್ಕಿ ಬೆಳೆ ಬೆಳೆಯೋದಕ್ಕೆ ಹೇಳುತ್ತಿದ್ದಾರೆ. ನಮ್ಮಲ್ಲಿ ಮಳೆ ಇಲ್ಲ ಅಂತಿದ್ದಾರೆ. ಹಾಗಾದರೆ ತಮಿಳುನಾಡಿಗೆ ಕೊಡಲು ನೀರು ಇದ್ಯಾ? ಎಂದು ರವಿಕುಮಾರ್ ಪ್ರಶ್ನಿಸಿದರು.
ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಸರ್ಕಾರ ಮೀನಾಮೇಷ ಎಣಿಸಿ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡಿದೆ. ಆದರೆ ಬರ ಪರಿಹಾರವನ್ನು ಕೂಡಲೇ ಘೋಷಣೆ ಮಾಡಬೇಕು, ಎಕರೆಗೆ ತಲಾ 25 ಸಾವಿರ ರೂಪಾಯಿ ಬೆಳೆ ಪರಿಹಾರ ಕೊಡಲಿ ಎಂದು ಆಗ್ರಹಿಸಿದರು. ಯಡಿಯೂರಪ್ಪ ರಾಜ್ಯ ಪ್ರವಾಸದ ವಿಚಾರ ಕುರಿತು ಪ್ರತಿಕ್ರಿಯಿಸಿ, ಎರಡು ದಿನಗಳಲ್ಲಿ ಈ ಬಗ್ಗೆ ಪ್ರಕಟಿಸುತ್ತೇವೆ, ನಾಳೆ ಈ ಸಂಬಂಧ ಸಭೆ ಮಾಡಲಿದ್ದೇವೆ, ರಾಜ್ಯಾಧ್ಯಕ್ಷರು ಸೇರಿದಂತೆ ಅನೇಕ ನಾಯಕರು ಈ ಪ್ರವಾಸದಲ್ಲಿ ಇರುತ್ತಾರೆ. ಕಾವೇರಿ ವಿಚಾರ ಇಟ್ಟುಕೊಂಡು ಆ ಭಾಗದಲ್ಲೇ ಪ್ರವಾಸ ಶುರು ಮಾಡಬೇಕು ಅಂತ ಅಂದುಕೊಂಡಿದ್ದೇವೆ, ಎಲ್ಲರೂ ಒಟ್ಟಾಗಿ ಪ್ರವಾಸ ಮಾಡುತ್ತೇವೆ ಎಂದು ತಿಳಿಸಿದರು.