ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿರುವ ಖಾಸಗಿ ಲಾಡ್ಜ್ ವೊಂದರಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಯುವತಿಯರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕುಡಚಿ ಪಟ್ಟಣದ ಲಾಡ್ಜ್ದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಸಿಇಎನ್ ಇನ್ಸ್‌ಪೆಕ್ಟರ್ ಬಿ ಆರ್ ಗಡ್ಡೇಕರ್ ನೇತೃತ್ವದಲ್ಲಿ ದಾಳಿ ನಡೆಸಿ ಗುಜರಾತ್, ಪಶ್ಚಿಮ ಬಂಗಾಳ ಮೂಲದ ತಲಾ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳಾದ ಲಾಡ್ಜ್ ಮ್ಯಾನೇಜರ್ ಮೈಸೂರು ಜಿಲ್ಲೆ ನಂಜನಗೂಡು ಮೂಲದ ರಮೇಶ್ ರಾವಳಿ, ಶಂಕರ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.
ಆರೋಪಿಗಳು ಲಾಡ್ಜ್ ಬಾಡಿಗೆ ಪಡೆದು ಅಂತಾರಾಜ್ಯ ಯುವತಿಯರನ್ನು ಕರೆತಂದು ಮೊಬೈಲ್ನಲ್ಲಿ ಯುವತಿಯರ ಭಾವಚಿತ್ರ ತೋರಿಸಿ ದಂಧೆ ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.