ಬೆಂಗಳೂರು: ”ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಅನುಕೂಲವಾಗಲಿದೆ” ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ”ಬಿಜೆಪಿ ಮತ್ತು ಜೆಡಿಎಸ್ ಏನಾದರೂ ಮಾಡಿಕೊಳ್ಳಲಿ. ಅದು ನಮಗೆ ಸಂಬಂಧಪಟ್ಟ ವಿಷಯ ಅಲ್ಲ. ಆದರೆ, ಅವರು ಮೈತ್ರಿ ಮಾಡಿದರೆ ಕಾಂಗ್ರೆಸ್ಗೆ ಅನುಕೂಲವಾಗಲಿದೆ. ಇದರಿಂದ ಸೆಕ್ಯುಲರ್ ಎನ್ನುವ ಹೆಸರು ಇಟ್ಟುಕೊಂಡಿರುವ ಜೆಡಿಎಸ್ ಬಣ್ಣವೂ ಬಯಲಾಗಲಿದೆ. ನಾವು ಏಕಾಂಗಿಯಾಗಿ ರಾಜ್ಯದಲ್ಲಿ ಕನಿಷ್ಠ ಅಂದ್ರೂ 20 ಸ್ಥಾನಗಳನ್ನಾದರೂ ಗೆಲ್ಲಲಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
”ಚುನಾವಣೆ ಮುಗಿದು ಐದಾರು ತಿಂಗಳಾದರೂ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಜನರಿಂದ ತಿರಸ್ಕೃತವಾಗಿರುವ ಆ ಪಕ್ಷವು ಈಗಾಗಲೇ ಮುಳುಗಿ ಹೋಗಿರುವ ಹಡಗು. ಸಂಪೂರ್ಣ ಹತಾಶ ಸ್ಥಿತಿ ತಲುಪಿರುವ ಪಕ್ಷಕ್ಕೆ ಯಾವ ಭವಿಷ್ಯವೂ ಇಲ್ಲ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಖಾಲಿಯಾಗುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.
”ಬಿಜೆಪಿ ಯಡಿಯೂರಪ್ಪ ಅವರಂತಹ ಹಿರಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಇದು ಅವರಿಗೂ ಗೊತ್ತು. ಆದರೂ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಆ ಪಕ್ಷದ 25 ಸಂಸದರು ರಾಜ್ಯಕ್ಕೆ ನ್ಯಾಯ ಕೊಡಿಸಬೇಕು. ಆದರೆ, ಅವರೆಲ್ಲ ಮೋದಿಯವರಿಗೆ ಹೆದರಿಕೊಂಡು ತುಟಿ ಬಿಚ್ಚುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಆರ್ಎಸ್ಗೆ ಭೇಟಿ ನೀಡುತ್ತಿರುವುದರ ಹಿಂದೆ ರಾಜಕೀಯ ಪ್ರಚಾರ ಪಡೆಯುವ ಉದ್ದೇಶವಿದೆ. ಸ್ವತಃ ನೀರಾವರಿ ಸಚಿವರೂ ಆಗಿದ್ದ ಅವರು ಹೀಗೆ ನಡೆದುಕೊಳ್ಳುತ್ತಿರುವುದು ಅನುಚಿತ” ಎಂದು ತಿರುಗೇಟು ನೀಡಿದರು.
Laxmi News 24×7