ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು 2023-24ನೇ ಶೈಕ್ಷಣಿಕ ಸಾಲಿನಿಂದ ತರಲು ತೀರ್ಮಾನಿಸಲಾಗಿದೆ.
ಇನ್ನು ಮುಂದೆ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡರೆ, ವರ್ಷಕ್ಕೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಜಂಟಿಯಾಗಿ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನದ ಅಂಗವಾಗಿ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹತ್ತನೇ ತರಗತಿಯಲ್ಲಿ ಮೂರು ಬಾರಿ ಪರೀಕ್ಷೆ ತೆಗೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಮಕ್ಕಳಿಗೆ ಒಂದು ವರ್ಷ ವ್ಯರ್ಥ ಆಗಬಾರದು ಎಂದು ವರ್ಷದಲ್ಲಿ ಮೂರು ಬಾರಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್ವೆಟ್ ಹಾಲ್ನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಯಾವುದೋ ಒಂದು ಕಾರಣಕ್ಕೆ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಇಡೀ ವರ್ಷ ಅವರ ಜೀವನ ವ್ಯರ್ಥವಾಗಬಾರದು. ಪರೀಕ್ಷೆಗಳು ಮಕ್ಕಳನ್ನು ಫೈಲ್ ಮಾಡುವುದಕ್ಕಲ್ಲ, ಜೀವನದ ಬಗ್ಗೆ ಕಲಿಕೆಗಾಗಿ ಇರಬೇಕು ಎಂದು ಹೇಳಿದ ಅವರು, ಇದರಿಂದ ಅನುತೀರ್ಣಗೊಂಡ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗಲು ಅವಕಾಶ ಸಿಗುತ್ತದೆ ಹಾಗೂ ಕಡಿಮೆ ಅಂಕ ಪಡೆದವರು ಓದಿ ಮತ್ತೆ ಹೆಚ್ಚು ಅಂಕ ಗಳಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದರು.