ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೇಸ್ಗಳ ಸಂಖ್ಯೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 6,806 ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ 3,454 ಕೇಸ್ಗಳು ಬೆಂಗಳೂರಿನಲ್ಲೇ ಇವೆ.
ಪ್ರಕರಣಗಳ ಸಂಖ್ಯೆ ಏರುತ್ತಿರುವುದು ಆತಂಕ ಮೂಡಿಸಿದೆ.
2022ರಲ್ಲಿ ಇದೇ ವೇಳೆಗೆ ರಾಜ್ಯದಲ್ಲಿ 5,500 ಪ್ರಕರಣಗಳು ಪತ್ತೆಯಾಗಿದ್ದವು. ರಾಜಧಾನಿ ಬೆಂಗಳೂರಿನಲ್ಲಿ 1,058 ಪ್ರಕರಣಗಳು ವರದಿಯಾಗಿದ್ದವು. 2021ರ ಸೆಪ್ಟೆಂಬರ್ ಅಂತ್ಯಕ್ಕೆ ನಗರದಲ್ಲಿ 520 ಪ್ರಕರಣಗಳು ದಾಖಲಾಗಿದ್ದವು.
ರಾಜ್ಯದಲ್ಲಿ ಉಂಟಾಗುತ್ತಿರುವ ಹಮಾಮಾನ ಬದಲಾವಣೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮಳೆ ಕಡಿಮೆ. ಆದರೂ, ಡೆಂಗ್ಯೂ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಕಾರಣ, ಮಳೆ ನಿರಂತರವಾಗಿ ಬೀಳದೇ ಇರುವುದರಿಂದ ಸೊಳ್ಳೆಗಳು ಮೊಟ್ಟೆ ಇಡುವುದಕ್ಕೆ ಪೂರಕ ವಾತಾವರಣ ನಿರ್ಮಾಣಗೊಂಡಿವೆ. ನಿರಂತರವಾಗಿ ಮಳೆ ಸುರಿಯುತ್ತಿದ್ದರೆ, ನೀರು ನಿಲ್ಲುತ್ತಿರಲಿಲ್ಲ, ಮೊಟ್ಟೆಗಳು ನೀರಿನಲ್ಲಿ ಹೋಗುತ್ತಿದ್ದವು ಎನ್ನುತ್ತಾರೆ ವೈದ್ಯರು.
ಡೆಂಗ್ಯೂ ಜ್ವರದ ಲಕ್ಷಣಗಳೇನು?: ಜ್ವರ, ತಲೆನೋವು, ವಿಪರೀತ ಶೀತ, ಗಂಟಲು ನೋವು, ವಾಂತಿ, ಹೊಟ್ಟೆನೋವು, ಮೈ-ಕೈ ನೋವು, ಅತಿಸಾರ, ಹೃದಯ ಬಡಿತ ಹೆಚ್ಚಾಗುವುದು, ಮೈಮೇಲೆ ಅಲರ್ಜಿ ರೀತಿಯಲ್ಲಿ ಗುಳ್ಳೆಗಳು ಬರುವುದು ಇದರ ಲಕ್ಷಣಗಳು.
ಸೊಳ್ಳೆಗಳ ಮತ್ತು ಡೆಂಗ್ಯೂ ಕೇಸ್ಗಳ ನಿಯಂತ್ರಣ ಹೇಗೆ?: ಸೊಳ್ಳೆಗಳನ್ನು ನಿಯಂತ್ರಿಸಬೇಕು. ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸಬೇಕು. ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ. ನೀರು ಶೇಖರಣೆಗೊಳ್ಳುವ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ. ಮನೆಯ ಸುತ್ತ ಹಾಗೂ ಟೆರೆಸ್ ಮೇಲೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ತೆಂಗಿನ ಚಿಪ್ಪು, ಟಯರ್ ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಮನೆ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು