ಬೆಂಗಳೂರು: ಚಿತ್ರೀಕರಣವಾದ ಸಿನಿಮಾ ದೃಶ್ಯಗಳ ಹಾರ್ಡ್ ಡಿಸ್ಕ್ ಕೊಡದೇ, ನಿರ್ಮಾಪಕರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಛಾಯಾಗ್ರಾಹಕನ ವಿರುದ್ಧ ಪ್ರಕರಣ ದಾಖಲಾಗಿದೆ. ‘ಸಮುದ್ರಂ’ ಸಿನಿಮಾದ ನಿರ್ಮಾಪಕಿ ರಾಜಲಕ್ಷ್ಮಿ ನೀಡಿರುವ ದೂರಿನನ್ವಯ ಛಾಯಾಗ್ರಾಹಕ ರಿಷಿಕೇಷ್ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಅನಿತಾ ಭಟ್ ಮುಖ್ಯ ಭೂಮಿಕೆಯಲ್ಲಿರುವ ‘ಸಮುದ್ರಂ’ ಸಿನಿಮಾವನ್ನು ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ಹೆಸರಿನಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. ಈ ಚಿತ್ರಕ್ಕೆ ರಿಷಿಕೇಷ್ ಛಾಯಾಗ್ರಾಹಕನಾಗಿದ್ದು, ರಾಜಲಕ್ಷ್ಮಿ ಎಂಬುವವರು ಬಂಡವಾಳ ಹೂಡಿದ್ದರು. ಚಿತ್ರದ ಸಂಗೀತ, ಡಬ್ಬಿಂಗ್, ರೀ – ರೆಕಾರ್ಡಿಂಗ್, ಎಡಿಟಿಂಗ್ ಸೇರಿದಂತೆ ಪ್ರಮುಖ ಜವಬ್ದಾರಿಯನ್ನು ರಿಷಿಕೇಷ್ ವಹಿಸಿಕೊಂಡಿದ್ದ. ಪ್ರತಿಯಾಗಿ ಹಂತ ಹಂತವಾಗಿ 19 ಲಕ್ಷ ರೂಪಾಯಿ ಆನ್‌ಲೈನ್ ಮೂಲಕ ಮತ್ತಷ್ಟು ನಗದು ರೂಪದಲ್ಲಿ ಹಣವನ್ನು ನಿರ್ಮಾಪಕರಿಂದ ಪಡೆದುಕೊಂಡಿದ್ದ.
ಆದರೆ, ಅರ್ಧ ಶೂಟಿಂಗ್ ಮುಗಿಯುವಷ್ಟರಲ್ಲೇ ಚಿತ್ರ ತಂಡದಿಂದ ದೂರ ಸರಿದಿದ್ದ ರಿಷಿಕೇಷ್, ತಾನು ಹೇಳಿದವರನ್ನು ಸಹ ನಿರ್ಮಾಪಕರನ್ನಾಗಿ ಸೇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಶೂಟ್ ಮಾಡಿರುವ ಹಾರ್ಡ್ ಡಿಸ್ಕ್ ಕೂಡ ಕೊಡುವುದಿಲ್ಲ ಎಂದಿದ್ದ. ಸುಮಾರು ಹತ್ತು ತಿಂಗಳಿನಿಂದ ಹಾರ್ಡ್ ಡಿಸ್ಕ್ ಕೊಡದೇ, ಕರೆ ಮಾಡಿ ವಿಚಾರಿಸಿದರೆ ನಿರ್ಮಾಪಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಛಾಯಗ್ರಾಹಕ ರಿಶಿಕೇಷ್ ವಿರುದ್ಧ ಆರೋಪ ಮಾಡಲಾಗಿದೆ. ಈ ಬಗ್ಗೆ ನಿರ್ಮಾಪಕಿ ರಾಜಲಕ್ಷ್ಮಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Laxmi News 24×7