ಬೆಂಗಳೂರು: ಪ್ರಚಂಡ ಬಹುಮತದೊಂದಿಗೆ ಅಧಿಕಾರ ಹಿಡಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಶತ ದಿನಗಳ ಸಂಭ್ರಮ. ನೂರು ದಿನಗಳಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನ ಕೇಂದ್ರೀಕರಿಸಿ ಕಾಂಗ್ರೆಸ್ ಸರ್ಕಾರ ಕರ್ನಾಟಕ ಮಾದರಿ ಅಭಿವೃದ್ಧಿ ಆಡಳಿತ ನೀಡಲು ಕಸರತ್ತು ನಡೆಸುತ್ತಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿದು ನೂರು ದಿನಗಳನ್ನು ಪೂರೈಸುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಬಹುಮತ ಗಳಿಸಿ ಕರುನಾಡ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಶತದಿನ ಪೂರೈಸುವ ಸಂಭ್ರಮದಲ್ಲಿದೆ. ನೂರು ದಿನಗಳ ತನ್ನ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಹಲವು ವಿವಾದ, ಆರೋಪ, ಸವಾಲುಗಳನ್ನು ಎದುರಿಸಬೇಕಾಯಿತು. ಈ ಮಧ್ಯೆ ಶತದಿನಗಳಲ್ಲಿ ಸಿದ್ದರಾಮಯ್ಯ ಸರ್ಕಾರ ತಮ್ಮ ಚುನವಾಣಾ ಭರವಸೆಯ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.
ನೂರು ದಿನಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಟೇಕಾಫ್ ಪ್ರಕ್ರಿಯೆಯಲ್ಲಿದ್ದು, ತಮ್ಮ ಆಡಳಿತ ವೈಖರಿ ಹೇಗಿರಲಿದೆ ಎಂಬ ಮುನ್ಸೂಚನೆಯನ್ನು ನೀಡಿದೆ. ಆಡಳಿತಕ್ಕೆ ಹೊಸ ರೂಪ ನೀಡಿ, ಸಾಮಾಜಿಕ ನ್ಯಾಯ, ಕೋಮು ಸೌಹಾರ್ದತೆಗೆ ಪೂರಕ ವಾತಾವರಣ ಸೃಷ್ಟಿಸಿ ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ನಿಲುವು ತಳೆಯುವ ಮೂಲಕ ನಮ್ಮ ಸರ್ಕಾರ ಯಾವುದೇ ಕೋಮು ದ್ವೇಷಗಳಿಗೆ ಆಸ್ಪದ ನೀಡಲ್ಲ ಎಂಬ ಸಂದೇಶ ನೀಡಿದೆ. ನೂರು ದಿನಗಳಲ್ಲಿ ಆಡಳಿತದ ಮೇಲೆ ಹಿಡಿತ ಸಾಧಿಸುವ ಪ್ರಕ್ರಿಯೆಯಲ್ಲಿರುವ ಸಿದ್ದರಾಮಯ್ಯ ಸರ್ಕಾರ ಕರ್ನಾಟಕ ಮಾದರಿ ಅಭಿವೃದ್ಧಿಯ ಆಡಳಿತವೆಂಬ ಪರಿಕಲ್ಪನೆಯೊಂದಿಗೆ ಹೆಜ್ಜೆ ಇಡುತ್ತಿದೆ. ನೂರು ದಿನಗಳ ಕಾಂಗ್ರೆಸ್ ಸರ್ಕಾರ ಬಹುತೇಕ ಆಡಳಿತ ಪರಿವರ್ತನೆಯ ಹಂತದಲ್ಲಿದೆ.