ಬೆಳಗಾವಿ : ಮಹಾನಗರ ಪಾಲಿಕೆಯ 48ನೇ ವಾರ್ಡ್ಗೆ ಒಳಪಡುವ ಬಸವನಕುಡಚಿಯ ಜನರ ಸಮಸ್ಯೆ ಆಲಿಸಲು ಕಳೆದ ನಾಲ್ಕು ದಶಕಗಳಿಂದ ಒಬ್ಬ ಪಾಲಿಕೆ ಆಯುಕ್ತರು ಭೇಟಿ ಕೊಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ.
1984ರಲ್ಲಿ ಈ ಪಾಲಿಕೆ ಅಸ್ತಿತ್ವಕ್ಕೆ ಬಂದಿದೆ. ಆದರೆ ಈವರೆಗೆ ಒಬ್ಬರೇ ಒಬ್ಬ ಪಾಲಿಕೆ ಆಯುಕ್ತರು ಬಂದು ಜನರ ಸಮಸ್ಯೆ ಆಲಿಸಿಲ್ಲವಂತೆ. ನಾವು ಹೆಸರಿಗಷ್ಟೇ ಪಾಲಿಕೆ ವ್ಯಾಪ್ತಿಯಲ್ಲಿದ್ದೇವೆ. ಹಾಗಾಗಿ ನಾವು ಪಾಲಿಕೆಯಲ್ಲಿ ಮುಂದುವರಿಯಲ್ಲ. ನಮ್ಮ ಊರಿಗೆ ಪ್ರತ್ಯೇಕ ಗ್ರಾಮ ಪಂಚಾಯತಿ ರಚಿಸಿ ಎಂದು ಆಗ್ರಹಿಸಿದ್ದಾರೆ.
ರಾಜಕುಮಾರ ಪಾಟೀಲ ಎಂಬುವವರು ಮಾತನಾಡಿ, ಬರೀ ಹೆಚ್ಚಿಗೆ ತೆರಿಗೆ ತುಂಬಲು ಮಾತ್ರ ನಾವು ಪಾಲಿಕೆಯಲ್ಲಿ ಇರುವಂತಾಗಿದೆ. ನಾವು ತುಂಬುವ ತೆರಿಗೆ ಪ್ರಕಾರವಾದ್ರೂ ಅಭಿವೃದ್ಧಿ ಆಗಬೇಕಲ್ವೇ..? ಇನ್ಮುಂದೆ ನಾವು ಪಾಲಿಕೆಗೆ ತೆರಿಗೆ ತುಂಬುವುದಿಲ್ಲ. ಈ ಹಿಂದೆ ಇದ್ದಂತೆ ಈಗಲೂ ನಮ್ಮ ಊರಿಗೆ ಪ್ರತ್ಯೇಕ ಗ್ರಾಮ ಪಂಚಾಯತಿ ರಚಿಸಬೇಕು ಎಂದು ಒತ್ತಾಯಿಸಿದರು.
ಮೇಯರ್ ಬರುವುದು ಕೂಡ ಅಷ್ಟಕ್ಕಷ್ಟೇ: ಪಾಲಿಕೆ ಆಯುಕ್ತರು ಅಷ್ಟೇ ಅಲ್ಲ, ಮೇಯರ್ ಕೂಡಾ ಬಸವನಕುಡಚಿಗೆ ಬರುವುದು ಅಪರೂಪ. ಹಿಂದೊಮ್ಮೆ ಕಾರ್ಯಕ್ರಮ ನಿಮಿತ್ತ ಇಲ್ಲಿಗೆ ಬಂದಿದ್ದು ಬಿಟ್ಟರೆ, ಇಲ್ಲಿನ ಸಮಸ್ಯೆ ಆಲಿಸಲು ಬಂದ ಇತಿಹಾಸವೇ ಇಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.