ಬೆಂಗಳೂರು: ಯಾವುದೇ ಕಾರಣಕ್ಕೂ ನಾನು ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ಸಾಬೀತುಪಡಿಸಿದರೆ ಬಹಿರಂಗವಾಗಿ ನೇಣಿಗೇರಲು ಸಿದ್ದವಿದ್ದೇನೆ ಎಂದು ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಡುತ್ತಾರೆ ಎನ್ನುವ ವದಂತಿ ಹರಡಿದೆ. ಹಾಗಾಗಿ ನನಗೆ ನಿನ್ನೆಯಿಂದ ಸ್ವೀಕರಿಸಲು ಸಾಧ್ಯವಾಗದಷ್ಟು ದೂರವಾಣಿ ಕರೆಗಳು ಬರುತ್ತಿದೆ. ಆದರೆ, ನಾನು ಯಾರನ್ನು ಭೇಟಿ ಆಗಿಲ್ಲ. ನಿನ್ನೆ ಸಂಜೆ (ಗುರುವಾರ) ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ ಎಂದು ವರದಿಯಾಗಿದೆ. ಆದರೆ, ನಾನು ಭೇಟಿಯಾಗಿದ್ದು ಸಾಬೀತುಪಡಿಸಿದರೆ ಬಹಿರಂಗವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲೆಸೆದರು.
ಕಳೆದ ಹತ್ತು ದಿನಗಳ ಹಿಂದೆ ಪಕ್ಷದ ಕಚೇರಿಯಲ್ಲಿ ಒಂದು ಮಾತು ಕೊಟ್ಟಿದ್ದೇನೆ. ಕ್ಷೇತ್ರದ ಜನ ನನಗೆ ಮತ ಕೊಟ್ಟಿದ್ದಾರೆ ಬಿಜೆಪಿಗೆ ಬಂದ ನಂತರ ಪಕ್ಷ ಗೌರವ ಸ್ಥಾನಮಾನ ಕೊಟ್ಟಿದೆ ಐದು ವರ್ಷ ವಿರೋಧ ಪಕ್ಷದಲ್ಲಿ ಕೆಲಸ ಮಾಡುತ್ತೇವೆ. ಆ ಶಕ್ತಿ ನಮಗೆ ಇದೆ. ದಯಮಾಡಿ ನಮ್ಮ ತೇಜೋವಧೆ ಮಾಡುವ ಕೆಲಸವನ್ನು ಮಾಡಬೇಡಿ ನಾವು ಭಾರತೀಯ ಜನತಾ ಪಕ್ಷದಲ್ಲೇ ಉಳಿಯುತ್ತೇವೆ.