Breaking News

ಅಮೃತಹಳ್ಳಿ ಜೋಡಿ ಕೊಲೆ ಪ್ರಕರಣ: 30 ದಿನದಲ್ಲಿ ತನಿಖೆ ನಡೆಸಿ ಚಾರ್ಜ್​ಶೀಟ್​ ಸಲ್ಲಿಕೆ

Spread the love

ಬೆಂಗಳೂರು : ಖಾಸಗಿ ಕಂಪನಿಯಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಜೋಡಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ನಗರದ ಅಮೃತಹಳ್ಳಿ ಠಾಣಾ ಪೊಲೀಸರು 30 ದಿನಗಳೊಳಗೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ‌. ಜೀ-ನೆಟ್ ಕಂಪನಿಯ ಅರುಣ್ ಫೆಲಿಕ್ಸ್, ವಿನಯ್ ರೆಡ್ಡಿ ಹಾಗೂ ಸಂತೋಷ್ ಎಂಬಾತನ ವಿರುದ್ಧ ದೋಷಾರೋಪಣೆ ಸಲ್ಲಿಕೆಯಾಗಿದೆ. ಉದ್ಯಮದಲ್ಲಿ ಸ್ಪರ್ಧಿಸಲಾಗದೇ ಎದುರಾಳಿ ಕಂಪನಿಯ ಅರುಣ್ ಕೊಲೆ ಸಂಚು ರೂಪಿಸಿದ್ದು ತನಿಖೆಯಲ್ಲಿ ಸಾಬೀತಾಗಿದೆ. ಇತ್ತೀಚಿನ ದಿನಗಳಲ್ಲಿ ಕಡಿಮೆ ಅವಧಿಯಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾದ ಪ್ರಕರಣ ಇದಾಗಿದೆ.

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ಮಾತನಾಡಿ, “ಎಸಿಪಿ ರಂಗಪ್ಪ ನೇತೃತ್ವದಲ್ಲಿ ನಡೆದಿದ್ದ ತನಿಖೆಯಲ್ಲಿ ಒಟ್ಟು 25 ಮಂದಿ ಪೊಲೀಸ್ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದರು. ಆರೋಪಿಗಳಾದ ಫೆಲಿಕ್ಸ್, ವಿನಯ್ ರೆಡ್ಡಿ ಹಾಗೂ ಸಂತೋಷ್ ಎಂಬವರನ್ನು ಬಂಧಿಸಲಾಗಿತ್ತು. ಪೊಲೀಸರು ಸುಮಾರು 22 ಕಡೆಗಳಲ್ಲಿ ಮಹಜರು ಮಾಡಿದ್ದರು. 126ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ ಪಡೆಯಲಾಗಿತ್ತು. ಇದೀಗ 1,350 ಪುಟಗಳ ಸುದೀರ್ಘ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ” ಎಂದರು.

ಪ್ರಕರಣವೇನು?: ಅಮೃತಹಳ್ಳಿಯ ಪಂಪಾ ಬಡಾವಣೆಯ 6ನೇ ಅಡ್ಡರಸ್ತೆಯಲ್ಲಿರುವ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಚೇರಿಗೆ ಜೂನ್ 11ರ ಸಂಜೆ ನುಗ್ಗಿದ್ದ ಫೆಲಿಕ್ಸ್ ಎಂಬಾತ, ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನುಕುಮಾರ್​ನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿದ್ದ. ಈ ಹಿಂದೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಫೆಲಿಕ್ಸ್​ನನ್ನು ನಿಂದಿಸುತ್ತಿದ್ದ ಫಣೀಂದ್ರ, ಇತ್ತೀಚಿಗೆ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದ.

ಅದೇ ದ್ವೇಷಕ್ಕೆ ಫೆಲಿಕ್ಸ್, ಫಣೀಂದ್ರನನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ಇನ್ನಿಬ್ಬರು ಆರೋಪಿಗಳಾದ ವಿನಯ್ ರೆಡ್ಡಿ ಹಾಗೂ ಸಂತೋಷ್​ಗೆ ಫಣೀಂದ್ರನ ಮೇಲೆ ಯಾವುದೇ ದ್ವೇಷವಿರಲಿಲ್ಲ. ಆದರೆ, ಫೆಲಿಕ್ಸ್ ಮಾತನ್ನು ಕೇಳಿ ಹತ್ಯೆಗೆ ಕೈ ಜೋಡಿಸಿದ್ದರು. ಆರೋಪಿಗಳಿಗೆ ವಿನುಕುಮಾರ್​ನನ್ನು ಹತ್ಯೆ ಮಾಡುವ ಉದ್ದೇಶವಿರಲಿಲ್ಲ. ಆದರೆ, ಫಣೀಂದ್ರನ ಹತ್ಯೆಯ ವೇಳೆ ತಡೆಯಲು ಹೋಗಿದ್ದ ವಿನುಕುಮಾರ್ ಮೇಲೂ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದರು. ಜೂನ್ 12ರಂದು ಆರೋಪಿಗಳಾದ ಫೆಲಿಕ್ಸ್, ವಿನಯ್ ರೆಡ್ಡಿ ಹಾಗೂ ಸಂತೋಷ್‌ನನ್ನು ಕುಣಿಗಲ್ ಬಳಿ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದರು.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ