ಮೈಸೂರು: ಗುತ್ತಿಗೆದಾರರ ಬಿಲ್ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಇಂದು ರಾಜ್ಯ ಮಟ್ಟದ ವಕೀಲರ ಪರಿಷತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.
ನನ್ನ ಹುಟ್ಟುಹಬ್ಬ ಆಗಸ್ಟ್ 3, ಆಗಸ್ಟ್ 12 ಎಂಬ ಎರಡು ದಿನಾಂಕಗಳು ಕೂಡ ತಪ್ಪು. ಒಂದನ್ನು ನಮ್ಮ ಮೇಷ್ಟ್ರು ಬರೆಸಿದ್ದರು, ಮತ್ತೊಂದನ್ನು ನಮ್ಮ ಅಪ್ಪ ಯಾವುದೋ ಒಂದು ಡೇಟ್ ಅನ್ನು ಬರೆಸಿದ್ದರು. ಈ ಎರಡು ದಿನಾಂಕಗಳು ಕೂಡ ತಪ್ಪು. ನನ್ನ ಜನ್ಮದಿನಾಂಕ ನನಗೆ ಸರಿಯಾಗಿ ಗೊತ್ತಿಲ್ಲ. ಹಾಗಾಗಿ ನನ್ನ ಹುಟ್ಟುಹಬ್ಬದ ದಿನಾಂಕದ ಬಗ್ಗೆ ನನಗೆ ಯಾವುದೇ ಆಸಕ್ತಿ ಇಲ್ಲ ಎಂದು ತಿಳಿಸಿದರು.
ಏಕರೂಪ ನಾಗರಿಕ ಸಂಹಿತೆ: ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ವಿಚಾರದಲ್ಲಿ ನಮ್ಮ ವಿರೋಧವಿದೆ. ಈಗಾಗಲೇ ಕೇರಳ ರಾಜ್ಯ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿದೆ. ನಾವು ಸಹ ವಿರೋಧಿಸಿದ್ದೇವೆ ಎಂದು ತಿಳಿಸಿದರು.
ತಮಿಳುನಾಡಿಗೆ ನೀರು ಬಿಡುವ ವಿಚಾರ: ತಮಿಳುನಾಡು ಕಾವೇರಿ ನೀರು ಬಿಡುವಂತೆ ಕೇಳುತ್ತಿದೆ. ಈ ಬಾರಿ ನಿರೀಕ್ಷಿತ ಮಳೆಯಾಗಿಲ್ಲ. ಹೀಗಾಗಿ ಸಂಕಷ್ಟ ಸೂತ್ರಗಳನ್ನು ಎರಡು ರಾಜ್ಯಗಳೂ ಪಾಲಿಸಬೇಕಾಗಿದೆ. ಆದರೂ ತಮಿಳುನಾಡು ನೀರು ಬಿಡುವಂತೆ ಕೇಳಲು ಶುರು ಮಾಡಿದೆ. ಈ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ಆನಂತರ ಮುಂದಿನ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.