ಬೆಂಗಳೂರು: ಗುತ್ತಿಗೆದಾರರನ್ನು ಮಾಧ್ಯಮದವರ ಮುಂದೆ ಯಾರು ಕಳಿಸುತ್ತಿದ್ದಾರೆ ಅಂತ ಗೊತ್ತಿದೆ.
ನನಗೆ ಎಲ್ಲವೂ ಗೊತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ. ಇಂದು ಸದಾಶಿವನಗರದಲ್ಲಿರುವ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗುತ್ತಿಗೆದಾರರು ವಿರೋಧ ಪಕ್ಷದ ನಾಯಕರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದರು. ಕಾನೂನು ಪ್ರಕಾರ ತನಿಖೆ ಮಾಡಬೇಕು ಅಂತ ಹೇಳಿದ್ದೇವೆ. ಕೆಂಪಣ್ಣ ದೂರು ಕೊಟ್ಟಿದ್ದಾರೆ, ಅವರಿಗೆ ನ್ಯಾಯ ಒದಗಿಸಬೇಕು. ಕೆಲಸಕ್ಕೆ ನ್ಯಾಯ ಒದಗಿಸಬೇಕು, ಜನರಿಗೂ ನ್ಯಾಯ ಸಿಗಬೇಕು ಎಂದು ತಿಳಿಸಿದರು.
ಪ್ರಚಾರಕ್ಕೆ ಯಾರು ಬೇಕಾದ್ರು ಹೋಗಲಿ. ದೆಹಲಿಗೆ ಯಾರು ಕರೆಯುತ್ತಿದ್ದಾರೆ ಅಂತ ನನಗೆ ಗೊತ್ತಿದೆ. ಬಂದು ಸ್ಟೇಟ್ಮೆಂಟ್ ಕೊಡಿ ಅಂತಾ ಕರೆಯುತ್ತಿದ್ದಾರೆ. ನಾವು ತನಿಖೆಗೆ ಆದೇಶ ಮಾಡಿದ್ದೇವೆ. ಅವರು ಮಾಡಿರುವ ಆರೋಪ ಪ್ರೂವ್ ಮಾಡಲಿ. ಯಾರೆಲ್ಲ ಪ್ರಾಮಾಣಿಕ ಕೆಲಸ ಮಾಡಿದ್ದಾರೋ, ಅವರಿಗೆಲ್ಲ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಇದೇ ವೇಳೆ ಡಿಕೆಶಿ ತಿಳಿಸಿದರು.
ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ: ಅಂದು ಗುತ್ತಿಗೆದಾರರು ಮಾಡಿದ್ದ 40% ಆರೋಪ ಸತ್ಯ, ಸದ್ಯ ಮಾಡುತ್ತಿರುವ 15% ಆರೋಪ ಸುಳ್ಳು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ವಿಧಾನಸೌಧದಲ್ಲಿ ಬಿಲ್ ಬಾಕಿ ವಿಚಾರಕ್ಕೆ ಪ್ರತಿಕ್ರಿಯಿಸುತ್ತ, ಬಿಲ್ ಬಾಕಿ ಬಗ್ಗೆ ತನಿಖೆ ನಡೆಸಲು ನಾಲ್ಕು ತಂಡ ರಚನೆಯಾಗಿದೆ. ಅವರ ವರದಿ ಬಳಿಕ ಬಿಲ್ ಕ್ಲಿಯರ್ ಮಾಡುತ್ತೇವೆ. ವರದಿ ಕೊಡುವ ಮೊದಲೇ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಈ ಅರೋಪಗಳು ಸತ್ಯಕ್ಕೆ ದೂರವಾಗಿವೆ. ಬಿಜೆಪಿಯ 40% ಕಮಿಷನ್ ಆಯಿತು. ಇದೀಗ ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆನ್ಲೈನ್ನಲ್ಲಿ ಬಿಲ್ ಪಾವತಿಗೆ ಕ್ರಮ: ಬಿಜೆಪಿ ಅವರ ಮಾತಿಗೆ ಕಿಮ್ಮತ್ತಿಲ್ಲ. ವಿರೋಧ ಪಕ್ಷದಲ್ಲಿ ಇದ್ದು ಕೆಲಸ ಮಾಡಲಿ. ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕಿದೆ. ಬೇಗ ಬಿಲ್ ಬಿಡುಗಡೆಯಾದರೆ ಕೆಲಸ ಮಾಡಲು ಅನುಕೂಲ ಆಗುತ್ತದೆ. ಆನ್ಲೈನ್ನಲ್ಲಿ ಬಿಲ್ ಪೇಮೆಂಟ್ ಮಾಡಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಶೀಘ್ರ ಬಿಲ್ ಪಾವತಿಗೆ ಕ್ರಮ: ಗುತ್ತಿಗೆದಾರರೂ ಸಹ ಕಷ್ಟದಲ್ಲಿದ್ದಾರೆ. ಆದಷ್ಟು ಬೇಗ ಬಾಕಿ ಬಿಲ್ ಪಾವತಿ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ. ಬಿಲ್ ಹಣ ಪಾವತಿಸಿದರೆ ಅವರಿಗೆ ಮುಂದಿನ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.