ರಾಯಚೂರು: ಜಿಲ್ಲೆಯಲ್ಲಿ ಪತ್ತೆಯಾದ ಆರು ಜನ ಕೊರೊನಾ ಸೋಂಕಿತರ ಸಂಪರ್ಕದಲ್ಲಿರುವವರ ಪತ್ತೆಗಾಗಿ ಇಡೀ ನಗರವನ್ನ ಇಂದು ಬಂದ್ ಮಾಡಲಾಗಿದೆ. ಸಂಪೂರ್ಣ ಲಾಕ್‍ಡೌನ್ ಇರುವುದರಿಂದ ಹೋಟೆಲ್, ಬೇಕರಿ, ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದ್ ಆಗಿದ್ದು, ಜನರ ಓಡಾಟವೂ ವಿರಳವಾಗಿದೆ. ಇದರಿಂದ ರಸ್ತೆಯ ಬದಿಯ ಭಿಕ್ಷುಕರು ಊಟವಿಲ್ಲದೆ ಪರದಾಡುತ್ತಿದ್ದಾರೆ.
ಮೂರನೇ ಹಂತದ ಲಾಕ್‍ಡೌನ್ ಆರಂಭವಾದ ನಂತರ ರಾಯಚೂರಿನಲ್ಲಿ ಲಾಕ್‍ಡೌನ್ ಸಡಲಿಕೆಯಾಗಿತ್ತು. ಭಿಕ್ಷೆ ಬೇಡಿ ಬದುಕುತ್ತಿದ್ದವರು ಕೂಡ ಈಗ ಊಟಕ್ಕಾಗಿ ಪರದಾಡುತ್ತಿದ್ದಾರೆ.
ಸಂಪೂರ್ಣ ಲಾಕ್‍ಡೌನ್ ಇರುವುದರಿಂದ ದಾನಿಗಳು ಸಹ ಊಟದ ಪಾಕೇಟ್ ನೀಡುತ್ತಿಲ್ಲ. ಹೀಗಾಗಿ ಕೇವಲ ನೀರು ಕುಡಿದು ಯಾರಾದರೂ ಊಟ ನೀಡುತ್ತಾರ ಅಂತ ನಿರೀಕ್ಷೆಯಲ್ಲೇ ಕಾಯುತ್ತಿದ್ದಾರೆ.
ರಾಯಚೂರು ರೈಲು ನಿಲ್ದಾಣ ಸೇರಿದಂತೆ ವಿವಿಧೆಡೆ ಇರುವ 200ಕ್ಕೂ ಹೆಚ್ಚು ಭಿಕ್ಷುಕರು ಇಂದು ಊಟವಿಲ್ಲದೆ ಪರದಾಡುತ್ತಿದ್ದಾರೆ. ಜಿಲ್ಲಾಡಳಿತ ಸಹ ರಸ್ತೆ ಬದಿಯ ಭಿಕ್ಷುಕರು, ಅನಾರೋಗ್ಯ ಪೀಡಿತ ವೃದ್ಧರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ.