ಬುಲ್ದಾನ(ಮಹರಾಷ್ಟ್ರ): ಇಂದು ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.ಎರಡು ಟ್ರಾವೆಲ್ ಬಸ್ಗಳ ಮಧ್ಯೆ ಅಪಘಾತ ನಡೆದು 6 ಜನ ಪ್ರಯಾಣಿಕರು ಸಾವನ್ನಪ್ಪಿ, 25 ಪ್ರಯಾಣಿಕರು ಗಾಯಗೊಂಡಿರುವ ಭೀಕರ ರಸ್ತೆ ಅಪಘಾತ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಮುಂಬೈ ನಾಗ್ಪುರ ಹೆದ್ದಾರಿಯ ಲಕ್ಷ್ಮಿ ನಗರ ಮಲ್ಕಾಪುರ ಬಳಿಯ ಫ್ಲೈಓವರ್ ಮೇಲೆ ಸಂಭವಿಸಿದೆ.
ಅಪಘಾತವಾದ ಬಸ್ ಟ್ರಾವೆಲ್ಸ್ ಸಂಖ್ಯೆ MH 08. 9458 ಆಗಿದ್ದು, ಅಮರನಾಥ ತೀರ್ಥಯಾತ್ರೆಯಿಂದ ಹಿಂತಿರುಗಿ ಹಿಂಗೋಲಿಗೆ ಹೋಗುತ್ತಿತ್ತು. ಈ ಬಸ್ನಲ್ಲಿ ಒಟ್ಟು 35 ರಿಂದ 40 ಯಾತ್ರಿಗಳಿದ್ದರು. ಇನ್ನು ಟ್ರಾವೆಲ್ಸ್ ಸಂಖ್ಯೆ MH 27 BX 4466 ಆಗಿದ್ದು ಈ ಬಸ್ ನಾಗ್ಪುರದಿಂದ ನಾಸಿಕ್ ಕಡೆಗೆ ಪ್ರಯಾಣಿಸುತ್ತಿದ್ದು, ಅಪಘಾತದ ಸಂದರ್ಭದಲ್ಲಿ 25 ರಿಂದ 30 ಪ್ರಯಾಣಿಕರಿದ್ದರು.
ಈ ಎರಡು ಬಸ್ಗಳು ಮಲ್ಕಾಪುರ ನಗರದ ಮೂಲಕ ಹಾದು ಹೋಗುವ ಹೆದ್ದಾರಿ ಸಂಖ್ಯೆ 6ರಲ್ಲಿ ಮುಖಾಮುಖಿ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ 2 ಬಸ್ಗಳು ನಜ್ಜುಗುಜ್ಜಾಗಿವೆ. ಜೊತೆಗೆ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎರಡೂ ಟ್ರಾವೆಲ್ಸ್‌ನಲ್ಲಿದ್ದ ಪ್ರಯಾಣಿಕರು ಸೇರಿ 25 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ಪಡೆದ ಪೊಲೀಸ್ ಇಲಾಖೆಯ ಸಿಬ್ಬಂದಿ ತಕ್ಷಣವೇ ಆಗಮಿಸಿ ಗಾಯಗೊಂಡವರನ್ನು ಚಿಕಿತ್ಸೆಗೆ ರವಾನಿಸಿದರು. ಇನ್ನು ಕ್ರೇನ್ ಮೂಲಕ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಬುಲ್ದಾನಾದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಾಹಿತಿ ಪ್ರಕಾರ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು, ಅಪಘಾತದ ನಂತರ ರಸ್ತೆಯಲ್ಲಿ ಬಹಳ ಹೊತ್ತು ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.