ಬೆಂಗಳೂರು : ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಪ್ರಕರಣದಲ್ಲಿ ಆರೋಪಿಗಳ ಕೇಸ್ ವಾಪಸ್ ವಿಚಾರವಾಗಿ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಬಹಳ ಜನ ಶಾಸಕರು ಬೇರೆ ಬೇರೆ ಸಂಸ್ಥೆಗಳ ಕೇಸ್ಗಳನ್ನು ವಾಪಸ್ ತೆಗೆದುಕೊಳ್ಳಿ ಎಂದು ಪತ್ರ ಕೊಡ್ತಿದ್ದಾರೆ. ಕೇಸ್ ವಾಪಸ್ ತಗೊಳ್ಳಿ ಅಂದಾಕ್ಷಣ ವಾಪಸ್ ತೆಗೆದುಕೊಳ್ಳಲು ಆಗುವುದಿಲ್ಲ.
ಅದಕ್ಕೊಂದು ಪದ್ದತಿ ಇದೆ. ಕ್ಯಾಬಿನೆಟ್ ಸಬ್ ಕಮಿಟಿ ಮುಂದೆ ವಿಷಯ ಮಂಡಿಸಬೇಕಾಗುತ್ತದೆ. ಸಬ್ ಕಮಿಟಿ ಸಾಧಕ-ಬಾಧಕದ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತದೆ. ಈ ವಿಷಯ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಕ್ಯಾಬಿನೆಟ್ಗೆ ಬರುತ್ತದೆ. ಕ್ಯಾಬಿನೆಟ್ನಲ್ಲಿ ಅಂತಿಮ ತೀರ್ಮಾನ ಆಗುತ್ತದೆ. ಸತ್ಯಾಂಶವನ್ನು ನೋಡಿ ಕಾನೂನಾತ್ಮಕ ಅವಕಾಶ ಇದ್ದರೆ ಕೇಸ್ ವಾಪಸ್ ತೆಗೆದುಕೊಳ್ತೇವೆ ಎಂದರು.
ಉಡುಪಿ ವಿಡಿಯೋ ಬಗ್ಗೆ ಮಾತನಾಡಿ, ಘಟನೆ ಬಹಳ ಸಣ್ಣದು. ಸಣ್ಣ ಘಟನೆಗೆ ರಾಜಕೀಯ ಬಣ್ಣ ಕೊಡುವುದು ಯಾಕೆ? ಪ್ರಿನ್ಸಿಪಾಲ್ ಇದ್ದಾರೆ, ಕಾಲೇಜು ಸಮಿತಿ ಇದೆ. ಈ ಬಗ್ಗೆ ದೂರು ಸಲ್ಲಿಕೆಯಾಗಿಲ್ಲ. ರಾಜಕೀಯ ಮಾಡುವುದನ್ನು ಬಿಜೆಪಿಯವರು ಮೊದಲು ನಿಲ್ಲಿಸಬೇಕು. ಹಿಂದೆಲ್ಲ ಕಾಲೇಜುಗಳಲ್ಲಿ ಇದೆಲ್ಲ ನಡೆಯುತ್ತಿರಲಿಲ್ವಾ? ಎಂದು ಹೇಳಿದರು.