Breaking News

ಗೃಹಲಕ್ಷ್ಮೀ ಯೋಜನೆ ನೋಂದಣಿ ಪ್ರಕ್ರಿಯೆಯಲ್ಲಿ ಜನರಿಂದ ಹಣ ಪಡೆದರೆ ಕ್ರಿಮಿನಲ್​ ಪ್ರಕರಣ:ಹೆಬ್ಬಾಳ್ಕರ್

Spread the love

ಬೆಳಗಾವಿ: “ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಯಾರಾದರು ಅಸಡ್ಡೆ ತೋರಿದರೆ, ಜನರಿಂದ ದುಡ್ಡು ಪಡೆದರೆ ಅಂಥವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, “ಈಗಾಗಲೇ ಮೂವರ ಲಾಗಿನ್ ಐಡಿ ವಾಪಸ್ ಪಡೆಯಲಾಗಿದೆ. ಸರಕಾರವಾಗಲಿ, ಇಲಾಖೆಯಾಗಲಿ ಸುಮ್ಮನೆ ಕುಳಿತಿಲ್ಲ. ಅಂಥವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು” ಎಂದರು.

“ಗೃಹಲಕ್ಷ್ಮೀ ಯೋಜನೆಯನ್ನು ಮಹಿಳೆಯರು ಉಚಿತವಾಗಿ ಮಾಡಿಸಿಕೊಳ್ಳಬೇಕೆಂದು ಬಹಳಷ್ಟು ಕಷ್ಟಪಟ್ಟು ಜಾರಿ ಮಾಡಿದ್ದೇವೆ. ಇದರಲ್ಲೂ ದುಡ್ಡು ಪಡೆಯುತ್ತಿರುವುದು ಗಮನಕ್ಕೆ ಬಂದರೆ ಅಂಥವರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ವಾಪಸ್ ಪಡೆಯಲು ಸೂಚನೆ ನೀಡಿದ್ದೇವೆ. ಅಲ್ಲದೇ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ತಹಶೀಲ್ದಾರ್, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಯಾರೇ ಆಗಲಿ ಹಣಪಡೆಯುವುದು ಗಮನಕ್ಕೆ ಬಂದರೆ ತಕ್ಷಣ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು. ಅಸಡ್ಡೆ ಮಾಡಿದರೆ ಅವರೂ ಜವಾಬ್ದಾರರಾಗುತ್ತಾರೆ” ಎಂದು ಹೆಬ್ಬಾಳ್ಕರ್ ಹೇಳಿದರು.

“ನಾವು ಯಾರಿಂದಲೂ ಉಚಿತವಾಗಿ ಕೆಲಸ ಮಾಡಿಸಿಕೊಳ್ಳುತ್ತಿಲ್ಲ. ಅಪ್ಲೋಡ್ ಮಾಡುವವರಿಗೆ ಸರಕಾರದಿಂದಲೇ ಪ್ರತಿ ಅರ್ಜಿಗೆ 12 ರೂ. ನೀಡಲಾಗುತ್ತಿದೆ. 10 ರೂ. ಅಪ್ ಲೋಡ್ ಮಾಡಲು, 2 ರೂ. ಪ್ರಿಂಟ್ ಔಟ್ ಕೊಡಲು ನೀಡಲಾಗುತ್ತಿದೆ. ಹಾಗಾಗಿ ಜನರು ಯಾರಿಗೂ ದುಡ್ಡು ಕೊಡಬೇಕಾಗಿಲ್ಲ” ಎಂದು ಸಚಿವೆ ಸ್ಪಷ್ಟಪಡಿಸಿದರು.

ರಾಜ್ಯ ಸರಕಾರವನ್ನು ಬೀಳಿಸಲು ಸಿಂಗಾಪುರದಲ್ಲಿ ತಂತ್ರ ರೂಪಿಸಲಾಗುತ್ತಿದೆ ಎಂಬ ಪ್ರಶ್ನೆಗೆ, “ನಾನು ಗೃಹಲಕ್ಷ್ಮೀ ಯೋಜನೆ ಜಾರಿಗೆ, ಕೆಡಿಪಿ ಸಭೆ ಮತ್ತು ಜನರನ್ನು ಭೇಟಿಯಾಗುವ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಡಿ.ಕೆ.ಶಿವಕುಮಾರ್​ ಅವರು ನಮ್ಮ ಅಧ್ಯಕ್ಷರು, ಅವರಿಗೆ ಎಲ್ಲ ಮಾಹಿತಿ ಇರುತ್ತದೆ. ಅದರ ಆಧಾರದ ಮೇಲೆ ಅವರು ಪ್ರತಿಕ್ರಿಯಿಸಿರಬಹುದು” ಎಂದರು.

ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆ ಪರಿಶೀಲಿಸಿದ ಡಿಕೆಶಿ: ಜುಲೈ 20ರಂದು ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಚಾಲನೆ ನೀಡಲಾಗಿತ್ತು. ಆ ದಿನನಿಂದಲೇ ರಾಜ್ಯದ ಸೇವಾ ಕೇಂದ್ರಗಳಲ್ಲಿ ಜನರು ಅರ್ಜಿ ಹಾಕಲು ಪ್ರಾರಂಭಿಸಿದ್ದರು. ಈ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ತಮ್ಮ ಕ್ಷೇತ್ರ ಕನಕಪುರದ ಕರ್ನಾಟಕ ಒನ್​ ನಾಗರಿಕ ಸೇವಾ ಕೇಂದ್ರಕ್ಕೆ ದಿಢೀರ್​ ಭೇಟಿ ಕೊಟ್ಟು ನೋಂದಣಿ ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದ್ದರು. ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಯನ್ನು ಹೇಗೆ ಮಾಡಲಾಗುತ್ತಿದೆ, ಅಲ್ಲಿನ ಸಿಬ್ಬಂದಿ ಏನಾದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರಾ, ವಿಳಂಬ ಮಾಡುತ್ತಿದ್ದಾರಾ, ಕುಂಟು ನೆಪ ಹೇಳುತ್ತಿದ್ದಾರಾ, ಮನೆ ಯಜಮಾನಿಗೆ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇದೆಯಾ, ನೋಂದಣಿ ಪ್ರಕ್ರಿಯೆ ಸರಳವಾಗಿದೆಯೇ ಎಂಬುದರ ಬಗ್ಗೆ ನೋಂದಣಿದಾರರಿಂದಲೇ ಖುದ್ದು ಮಾಹಿತಿ ಪಡೆದಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ