ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಹಲವು ನದಿಗಳಲ್ಲಿ ಒಳಹರಿವು ಹೆಚ್ಚಾಗಿದ್ದು, ನದಿ ಪಾತ್ರದ ಪ್ರಮುಖ ದೇವಾಲಯಗಳು ಜಲಾವೃತವಾಗಿವೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಗಣೇಶ್ ಮಂದಿರ ಜಲದಿಗ್ಬಂದನ ಗೊಂಡಿದ್ದು, ಮಹಾರಾಷ್ಟ್ರ – ಕರ್ನಾಟಕ ಗಡಿಯಲ್ಲಿರುವ ನರಸಿಂಹ ಹಾಡಿ ದೇವಸ್ಥಾನ ಭಾಗಶಃ ಜಲಾವೃತವಾಗಿದೆ.
ಇನ್ನು ಭಕ್ತರು ರಭಸವಾಗಿ ಹರಿಯುತ್ತಿರುವ ನೀರನ್ನು ಲೆಕ್ಕಿಸದೇ, ದತ್ತ ದೇವರ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ. ಕೃಷ್ಣಾ ನದಿ ಮತ್ತು ಪಂಚಗಂಗಾ ನದಿಗಳ ಸಂಗಮ ಸ್ಥಾನವಾಗಿರುವ ಕೊಲ್ಲಾಪುರ ಜಿಲ್ಲೆಯ ನರಸಿಂಹವಾಡಿ ದಂತ ಮಂದಿರ ಸದ್ಯ ಕೃಷ್ಣ ನದಿಯ ಒಳಹರಿವು ಹೆಚ್ಚಾಗಿರುವುದರಿಂದ ಅರ್ಧದಷ್ಟು ದೇವಸ್ಥಾನ ಜಲಾವೃತಗೊಂಡಿದೆ. ಲೆಕ್ಕಿಸದೇ ಭಕ್ತರು ದೇವರ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ನದಿಯಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ರಾತ್ರಿ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಯಾಗುವ ಸಾಧ್ಯತೆ ಹೆಚ್ಚಿದೆ.
ಮಹಾರಾಷ್ಟ್ರ ಭಾಗದಲ್ಲಿ ಎಡಬಿಡದೇ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಾಜಪುರ ಬ್ಯಾರೇಜ್ ನಿಂದ ನೀರು ಬಿಡುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದು, ನದಿ ಪಾತ್ರದ ಜನರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ನದಿಗೆ ಯಾರು ಇಳಿಯದಂತೆ ಹಾಗೂ ಜಲಾವೃತಗೊಂಡಿರುವ ಸೇತುವೆಗಳ ಮೇಲೆ ಸಂಚಾರ ಮಾಡಿದಂತೆ ಪೊಲೀಸ್ ಇಲಾಖೆ ಮುಖಾಂತರ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಯಿಂದ ಡಂಗೂರ ಸಾರಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಹಲವು ಸೇತುವೆಗಳು ಮುಳುಗಡೆ: ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಸಿದ್ದಾಳ-ಅಕ್ಕೋಳ, ಜತಾಟ-ಭಿವಶಿ, ಮಮದಾಪೂರ-ಹುನ್ನರಗಿ, ಕುನೂರ-ಬಾರವಾಡ ಸೇತುವೆಗಳು ನದಿಯಲ್ಲಿ ಒಳ ಹರಿವು ಹೆಚ್ಚಳ ಹಿನ್ನೆಲೆ ಜಲಾವೃತವಾಗಿವೆ ಮತ್ತು ಚಿಕ್ಕೋಡಿ ತಾಲೂಕಿನ ಮಲಿಕವಾಡ-ದತ್ತವಾಡ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.
ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಮೊಸಳೆಗಳು ಪ್ರತ್ಯಕ್ಷ: ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷ್ಣ ನದಿಯಲ್ಲಿ ನೀರಿನ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಭಸವಾಗಿ ಹರಿಯುತ್ತಿರುವ ನೀರಿನ ಜೊತೆ ಬೃಹದಾಕಾರದ ಮೊಸಳೆಗಳು ಕೂಡ ಹರಿದು ಬರುತ್ತಿವೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣ ಕಿತ್ತೂರು ಗ್ರಾಮದಲ್ಲಿ ಬೃಹದಾಕಾರದ ಮೊಸಳೆ ಪ್ರತ್ಯಕ್ಷವಾಗಿ ಕೆಲ ಕಾಲ ಜನರಲ್ಲಿ ಆತಂಕ ಸೃಷ್ಟಿಸಿತ್ತು.