ಶಿವಮೊಗ್ಗ: ಕಳೆದ ಮೂರು ದಿನಗಳಿಂದ ಶಿವಮೊಗ್ಗ ಜಿಲ್ಲೆ ಸೇರಿದಂತೆ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ನಿರಂತರ ವರ್ಷಧಾರೆಯಾಗುತ್ತಿದೆ. ಮಳೆ ಎಡಬಿಡದೇ ಸುರಿದ ಪರಿಣಾಮ, ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿವೆ.
ಅದರಂತೆ, ತುಂಗಾ ಜಲಾನಯದ ಪ್ರದೇಶಗಳಾದ ಶೃಂಗೇರಿ, ಕೊಪ್ಪ, ಆಗುಂಬೆ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ತುಂಗಾ ಡ್ಯಾಂ ಸಂಪೂರ್ಣವಾಗಿ ತುಂಬಿದ್ದು, ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ನಗರದ ಕೋರ್ಪಳಯ್ಯನ ಛತ್ರದ ಬಳಿಯ ಮಂಟಪ ಮುಳುಗುವ ಹಂತ ತಲುಪಿದ್ದು, ಇನ್ನೊಂದು ಅಡಿಯಷ್ಟು ನೀರು ಏರಿಕೆಯಾದರೆ ಮಂಟಪ ಸಂಪೂರ್ಣ ಮುಳುಗಡೆಯಾಗಲಿದೆ. ಹೀಗಾಗಿ ಮಂಟಪದ ಬಳಿ ಸಾರ್ವಜನಿಕರು ತಂಡೋಪತಂಡವಾಗಿ ಬಂದು ನದಿಯ ವಿಹಂಗಮ ನೋಟ ವೀಕ್ಷಿಸುತ್ತಿದ್ದಾರೆ. ಜಿಲ್ಲೆಯ ಹಲವೆಡೆಗಳಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ಹಲವು ಕಡೆಗಳಲ್ಲಿ ಜಮೀನುಗಳು ಜಲಾವೃತಗೊಂಡಿವೆ.
ಗದ್ದೆಗಳತ್ತ ಮುಖ ಮಾಡಿದ ರೈತರು: ಜೂನ್ ತಿಂಗಳಲ್ಲಿ ಸರಿಯಾದ ಮಳೆಯಾಗದ ಕಾರಣ ರೈತರು ಹೊಲ, ಗದ್ದೆಗಳತ್ತ ಮುಖ ಮಾಡಿರಲಿಲ್ಲ. ಜುಲೈ ತಿಂಗಳ ಮಧ್ಯ ಭಾಗದಿಂದ ಮಳೆ ಪ್ರಾರಂಭವಾಗಿದ್ದು, ರೈತರು ತಮ್ಮ ಹೊಲ ಗದ್ದೆಗಳತ್ತ ಮುಖ ಮಾಡಿದ್ದಾರೆ. ಭೂಮಿಯನ್ನು ಹಸನು ಮಾಡಿಟ್ಟಿದ್ದ ರೈತರು ಈಗ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ವೇಳೆಗಾಗಲೇ ನಾಟಿ ಕಾರ್ಯ ಮುಗಿಸಬೇಕಿದ್ದ ಅನ್ನದಾತರು ಈಗ ನಾಟಿ ಮಾಡಲು ಸಸಿ ಮಡಿ ಮಾಡಿದ್ದಾರೆ. ಮಳೆ ಸ್ವಲ್ಪ ವಿರಾಮ ನೀಡಿದರೆ, ರೈತರು ನಾಟಿ ಕಾರ್ಯದಲ್ಲಿ ತೂಡಗಿಕೊಳ್ಳುತ್ತಾರೆ. ಮಲೆನಾಡಿನ ಕೆಲ ಭಾಗಗಳಲ್ಲಿ ನಾಟಿ ಮಾಡದೆ ಬಿತ್ತನೆ ಮಾಡುತ್ತಾರೆ. ಇನ್ನು ಜೋಳ ಬಿತ್ತನೆ ಮಾಡಿದವರು ಕಳೆ, ಕುಂಟೆ ಹೊಡೆಯುತ್ತಿದ್ದಾರೆ.