Breaking News

ನಕಲಿ‌ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿಯ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Spread the love

ಬೆಳಗಾವಿ: ನಗರದಲ್ಲಿ ವಿವಿಧ ಕಂಪನಿಗಳ ಲೇಬಲ್‌ ಅಂಟಿಸಿ ನಕಲಿ‌ ಮದ್ಯ ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಳಗಾವಿ ಸಿಸಿಬಿ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ 4 ಲಕ್ಷ ರೂ.

ಮೌಲ್ಯದ ಮದ್ಯ ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆ ಗುರುವಾರ ಖಚಿತ ಮಾಹಿತಿ ಮೇರೆಗೆ ಪಿಐ ಅಲ್ತಾಫ್ ಮುಲ್ಲಾ ನೇತೃತ್ವದ ತಂಡ ಸದಾಶಿವ ನಗರದ ವಿರೂಪಾಕ್ಷಿ ರೆಸಿಡೆನ್ಸಿ ಅಪಾರ್ಟಮೆಂಟ್ ಮೇಲೆ ದಾಳಿ ಮಾಡಿ ಈ ಜಾಲವನ್ನು ಪತ್ತೆ ಹಚ್ಚಿದೆ.

ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ವಿವಿಧ ಬ್ರಾಂಡ್‌ನ ಖಾಲಿ ಮದ್ಯ ಬಾಟಲ್​ಗಳನ್ನು ಸಂಗ್ರಹಿಸಿಕೊಂಡು ಅವುಗಳಲ್ಲಿ ಗೋವಾ ಮತ್ತು ಕರ್ನಾಟಕದಲ್ಲಿ ತಯಾರಾದ ಕಡಿಮೆ ಬೆಲೆಯ ಮದ್ಯಕ್ಕೆ ರಾಸಾಯನಿಕವನ್ನು ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದ ಸ್ಪೋಟಕ ಮಾಹಿತಿ ತಿಳಿದು ಬಂದಿದೆ. ವಿವಿಧ ಬ್ರಾಂಡ್‌ನ ಲೇಬಲ್‌ಗಳನ್ನು ಅಂಟಿಸಿ, ನಕಲಿ ಮುಚ್ಚಳಗಳನ್ನು ಹಾಕಿ ಪ್ಯಾಕ್ ಮಾಡಿ, ಅದೇ ಬ್ರ್ಯಾಂಡ್​ನ ಬಾಕ್ಸ್​ಗಳಲ್ಲಿ ಹಾಕಿವ ಮೂಲ ಕಂಪನಿ ಎಂಬಂತೆ ಬಿಂಬಿಸುತ್ತಿದ್ದರು. ಸರ್ಕಾರದ ಅನುಮತಿ ಲೈಸನ್ಸ್ ಇಲ್ಲದೇ ತಮ್ಮ ಸ್ವಂತ ಲಾಭಕ್ಕೋಸ್ಕರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿರುವುದು ಈ ಪ್ರಕರಣದಿಂದ ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಎಸ್. ಎನ್.ಸಿದ್ದರಾಮಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಂಧಿತರಿಂದ ಒಟ್ಟು 4 ಲಕ್ಷ ಮೌಲ್ಯದ 750 ಎಮ್‌ಎಲ್​ನ ವಿಸ್ಕಿ, ರಮ್, ಓಡ್ಕಾ, ರಾಯಲ್ ಸ್ಟಾಗ್ ಮದ್ಯದ 439 ಬಾಟಲಿಗಳು. 375 ಎಂಎಲ್​ನ ಒರಿಜಿನಲ್ ಚಾಯ್ಸ್ ಮದ್ಯದ 20 ಬಾಟಲಿಗಳು. 180 ಎಂಎಲ್​ನ ಓಲ್ಡ್ ಟ್ಯಾವರ್ನ್ ಮದ್ಯದ 2 ಟೆಟ್ರಾ‌ ಪ್ಯಾಕ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅದೇ ರೀತಿ ಕೃತ್ಯಕ್ಕೆ ಬಳಸಿದ ಒಂದು ಇಂಡಿಕಾ ಕಾರು, 4 ಮೊಬೈಲ್, 17,500 ರೂ‌. ನಗದನ್ನು ಪೊಲೀಸರು ಜಪ್ತಿ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಜಾವೇದ್ ಬೇಪಾರಿ, ನಾಗೇಶ್​ ಎಂಬುವವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಇನ್ನು ಈ ಮದ್ಯದಲ್ಲಿ ಬೆರೆಸಿರುವ ರಾಸಾಯನಿಕ ಪದಾರ್ಥಗಳ ಪತ್ತೆಗೆ ವಿಧಿ‌ ವಿಜ್ಞಾನ ಸಂಸ್ಥೆಗೆ ಮಾದರಿ‌ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸುತ್ತೇವೆ. ಆರೋಪಿಗಳು ನಗರದಲ್ಲಿ ಯಾವ ಅಂಗಡಿಗಳಿಗೆ ನಕಲಿ ಮದ್ಯ ಪೂರೈಸುತ್ತಿದ್ದರು ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಎಸ್.ಎನ್. ಸಿದ್ದರಾಮಪ್ಪ ತಿಳಿಸಿದ್ದಾರೆ. ಈ ಅಕ್ರಮ ನಕಲಿ ಮಾರಾಟ ಜಾಲ ಭೇದಿಸಿದ ಇನ್ಸ್​ಪೆಕ್ಟರ್​ ಅಲ್ತಾಫ್ ಮುಲ್ಲಾ ತಂಡಕ್ಕೆ ಇದೇ ವೇಳೆ ಅಭಿನಂದನೆ ಸಲ್ಲಿಸಿ 8 ಸಾವಿರ ನಗದು ಬಹುಮಾನ‌ ವಿತರಿಸಲಾಯಿತು.


Spread the love

About Laxminews 24x7

Check Also

5 ತಾಲೂಕುಗಳ ಶಾಲೆಗೆ ಇಂದು ರಜೆ ಘೋಷಣೆ

Spread the loveಮಂಗಳೂರು/ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್​ 29(ಶುಕ್ರವಾರ) ರಂದು ಜಿಲ್ಲೆಯ ಶಾಲೆ, ಪ್ರೌಢಶಾಲೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ