ಬೆಂಗಳೂರು: 10 ಜಿಜೆಪಿ ಶಾಸಕರನ್ನು ಸದನ ಮುಗಿಯುವವರೆಗೆ ಸ್ಪೀಕರ್ ಅಮನಾತು ಮಾಡಿರುವುದನ್ನು ಖಂಡಿಸಿ ಬಿಜೆಪಿ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಅಮಾನತಾದ ಬಿಜೆಪಿ ಶಾಸಕರು ಸೇರಿ ಇತರೆ ಬಿಜೆಪಿ ಶಾಸಕರು ಹಾಗೂ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ, ಮುನಿರತ್ನ, ಸುರೇಶ್ ಕುಮಾರ್, ಬೈರತಿ ಬಸವರಾಜ್, ಸುನೀಲ್ ಕುಮಾರ್, ಗೋಪಾಲಯ್ಯ ಸೇರಿ ಹಲವು ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾದ್ದಾರೆ.
ಬಿಜೆಪಿ ಶಾಸಕರು ಸ್ಪೀಕರ್ ವಿರುದ್ಧ ಧಿಕ್ಕಾರ ಕೂಗಿದರು. ಸಿದ್ದರಾಮಯ್ಯ ವಿರುದ್ಧ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಸ್ಪೀಕರ್ ಅವರಿಂದ ಅನ್ಯಾಯ, ಅವಮಾನ ಎಂದು ಹೇಳುವ ಮೂಲಕ ಆಕ್ರೋಶ ಹೊರ ಹಾಕಿದರು. ಐಎಎಸ್ ಅಧಿಕಾರಿಗಳನ್ನು ಶಿಚ್ಟಾಚಾರ ಉಲ್ಲಂಘಿಸಿ ಗುಲಾಮರಂತೆ ಬಳಸಿರುವುದರ ವಿರುದ್ಧ ವಾಗ್ದಾಳಿ ನಡೆಸಿದರು.
ನಿನ್ನೆ ಸದನದಲ್ಲಿ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಸಲ್ಲಿಸಿದ ಹಿನ್ನೆಲೆ ಸಭಾಧ್ಯಕ್ಷ ಯು ಟಿ ಖಾದರ್ ಅವರು ಹತ್ತು ಜನ ಬಿಜೆಪಿ ಶಾಸಕರನ್ನು ಸದನ ಮುಗಿಯುವವರೆಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆ ವಿಧಾನ ಪರಿಷತ್ ಹಾಗೂ ವಿಧಾನಸಭೆ ಸದನ ಎರಡಕ್ಕೂ ಬಿಜೆಪಿ ಸದಸ್ಯರು ಗೈರಾಗಿದ್ದಾರೆ. ಅಷ್ಟೇ ಅಲ್ಲದೆ ವಿಧಾನಸಭೆ ಕಲಾಪಕ್ಕೆ ಜೆಡಿಎಸ್ ಸದಸ್ಯರು ಕೂಡ ಗೈರಾಗಿದ್ದು, ಬಿಜೆಪಿ ಸದಸ್ಯರ ಅಮಾನತಿಗೆ ಜೆಡಿಎಸ್ ಕೂಡ ಈ ಮೂಲಕ ಆಕ್ರೋಶ ಹೊರಹಾಕಿದೆ.