ಬೆಂಗಳೂರು : ಸಕಾಲಕ್ಕೆ ಸರಿಯಾಗಿ ಸದನಕ್ಕೆ ಸಚಿವರು ಆಗಮಿಸಬೇಕು ಎಂದು ಸಭಾಧ್ಯಕ್ಷ ಯು ಟಿ ಖಾದರ್ ವಿಧಾನಸಭೆಯಲ್ಲಿ ಸೂಚಿಸಿದ್ದಾರೆ.
ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು, ಸಚಿವರ ಹಾಜರಾತಿ ಇಲ್ಲ ಎಂದು ಆಕ್ಷೇಪಿಸಿದ ವೇಳೆ ಮಾತನಾಡಿದ ಸ್ಪೀಕರ್, ಪ್ರತಿ ದಿನವೂ ತಡ ಮಾಡುವುದು ಸರಿಯಲ್ಲ ಎಂದು ಸರ್ಕಾರಿ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರಿಗೆ ಖಡಕ್ ಸೂಚನೆ ನೀಡಿದರು.
ನೂತನ ಶಾಸಕರು 11 ಗಂಟೆಗೆ ಬಂದಿದ್ದರು. ಅದಕ್ಕೆ ಅವರನ್ನು ಅಭಿನಂದಿಸುವುದಾಗಿ ಹೇಳಿದರು. ಸಕಾಲಕ್ಕೆ ಸಚಿವರು ಬಾರದ ಹಿನ್ನೆಲೆಯಲ್ಲಿ ಸದನ ಆರಂಭ ವಿಳಂಬವಾಯಿತು. ಮಂತ್ರಿಗಳು ಸಮಯ ಪಾಲನೆ ಮಾಡಬೇಕು. ಸಮಯ ಸದ್ಬಳಕೆ ಆಗಬೇಕು. ಸಚಿವರಿಲ್ಲ ಎಂದು ಎದ್ದು ಹೋಗುವುದು ಪರಿಹಾರವಲ್ಲ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಹಿರಿಯ ಶಾಸಕ ಆರ್ ಅಶೋಕ್ ಅವರು, ಇಂಧನ ಸಚಿವ ಕೆ ಜೆ ಜಾರ್ಜ್ ಅವರನ್ನು ಹೊರತುಪಡಿಸಿದರೆ, ಬೇರೆ ಯಾವ ಸಚಿವರು ಇಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಚಿವರು ಇಲ್ಲದಿದ್ದರೆ ಕಲಾಪ ನಡೆಯುವುದಾದರೂ ಹೇಗೆ? ಸರ್ಕಾರಕ್ಕೆ ಸಡಿಲ ಕೊಡಬೇಡಿ. ಸರ್ಕಾರ ವಿಧಾನಸಭೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದು ವಿಧಾನಸಭೆಯ ಘನತೆಗೆ ತಕ್ಕದ್ದಲ್ಲ. ಈ ರೀತಿಯಾದರೆ ಸದನ ಘನತೆ, ಗೌರವ ಏನಾಗುತ್ತದೆ? ಸರ್ಕಾರದ ಕಿವಿ ಹಿಂಡಿ, ಸಚಿವರು ಬರುವವರೆಗೆ ಕಲಾಪ ಮುಂದೂಡಿ ಎಂದು ಹೇಳಿದರು.