ಬೆಂಗಳೂರು : ನೆರೆಯ ಕೇರಳದಲ್ಲಿ ನಂದಿನಿ ಮಳಿಗೆಗಳನ್ನು ವಿಸ್ತರಿಸದಿರಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಿರ್ಧರಿಸಿದೆ ಎಂದು ಮೂಲಗಳು ಬುಧವಾರ ಖಚಿತಪಡಿಸಿವೆ.
ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಕೆಎಂಎಫ್ ಈ ನಿರ್ಧಾರ ತಳೆದಿದೆ. ಕೇರಳದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಸಚಿವ ಜೆ. ಚಿಂಚು ರಾಣಿ ಮತ್ತು ಕೆಎಂಎಫ್ ಸಿಇಒ ನಡುವೆ ನಡೆದ ಮಾತುಕತೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ನಂದಿನಿ ಹಾಲು ಮತ್ತು ಹಾಲು ಸಂಬಂಧಿತ ಉತ್ಪನ್ನಗಳು ಕೇರಳದಾದ್ಯಂತ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಈ ಬ್ರ್ಯಾಂಡ್ ವಿಶೇಷವಾಗಿ ಕರ್ನಾಟಕದ ಗಡಿ ಜಿಲ್ಲೆಗಳಾದ ಕಾಸರಗೋಡುಗಳಲ್ಲಿ ಜನಪ್ರಿಯವಾಗಿದೆ. ಆದರೆ ಕೆಎಂಎಫ್ನ ಈ ನಿರ್ಧಾರದಿಂದ ಕೇರಳ ಗಡಿಯಲ್ಲಿ ನೆಲೆಸಿರುವ ಕನ್ನಡಿಗರಿಗೆ ನಿರಾಸೆಯಾಗಿದೆ. ಕರ್ನಾಟಕದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ನಿರ್ದೇಶನದಂತೆ ನಿರ್ಧಾರ ಕೈಗೊಳ್ಳಲಾಗಿದೆ.
ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಹಾಲು ಒಕ್ಕೂಟದ ಹಾಲು, ಮೊಸರು ಮತ್ತು ಇತರ ಡೈರಿ ಉತ್ಪನ್ನಗಳ ಮಾರಾಟಕ್ಕೆ ಈ ಹಿಂದೆ ಕೇರಳ ಆಕ್ಷೇಪ ವ್ಯಕ್ತಪಡಿಸಿತ್ತು. ನಂದಿನಿ ಉತ್ಪನ್ನಗಳ ಮಾರಾಟದಿಂದ ಕೇರಳ ಹಾಲು ಸಹಕಾರಿ ಹಾಲು ಮಾರಾಟ ಒಕ್ಕೂಟ (ಕೆಸಿಎಂಎಂಎಫ್) ಬ್ರ್ಯಾಂಡ್ ಮಿಲ್ಮಾ ಮೇಲೆ ಪರಿಣಾಮ ಬೀರುತ್ತಿದೆ ಎಂದು ನೆರೆಯ ರಾಜ್ಯ ದೂರಿದೆ.
ಕರ್ನಾಟಕದಲ್ಲಿ ಅಮುಲ್ ಹಾಲು ಮತ್ತು ಮೊಸರು ಮಾರಾಟಕ್ಕೆ ಅನುಮತಿ ನೀಡಿದ ಹಿಂದಿನ ಬಿಜೆಪಿ ಸರ್ಕಾರದ ಕ್ರಮವನ್ನು ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ (ಎಸ್) ಈ ಹಿಂದೆ ಬಲವಾಗಿ ವಿರೋಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವಿಧಾನಸಭೆ ಚುನಾವಣೆ ವೇಳೆ ಈ ವಿಚಾರ ಪ್ರಸ್ತಾಪವಾಗಿತ್ತು ಹಾಗೂ ಬಿಜೆಪಿ ಸರ್ಕಾರ ಇದಕ್ಕೆ ಸ್ಪಷ್ಟನೆ ನೀಡಿತ್ತು. ನಂದಿನಿಯನ್ನು ಅಮುಲ್ ಜೊತೆ ವಿಲೀನಗೊಳಿಸಲು ಅಂದಿನ ಬಿಜೆಪಿ ಸರ್ಕಾರ ಸಂಚು ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು.
Laxmi News 24×7