ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲನಾ ಸಿಬ್ಬಂದಿಯ ಸಮಯೋಚಿತ ಸಾಹಸ ಕಾರ್ಯ ಮತ್ತು ಧೈರ್ಯದಿಂದಾಗಿ ಪ್ರಯಾಣಿಕನ 5 ಲಕ್ಷ ರೂಪಾಯಿ ಹಣ ಮರಳಿ ಸಿಕ್ಕಿದೆ.
ಹಣ ಕದ್ದು ಓಡುತ್ತಿದ್ದ ಕಳ್ಳನನ್ನು ಬಸ್ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಬೆನ್ನಟ್ಟಿ ಹಿಡಿದಿದ್ದು, ಮೆಚ್ಚುಗೆಗೆ ಕಾರಣವಾಗಿದೆ.
ಜುಲೈ 14ರಂದು ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-4ರ ಕೆಎ-57 ಎಫ್ 3975 ಸಂಖ್ಯೆಯ ಬೆಂಗಳೂರು- ತಿರುನಲ್ಲಾರ್ ಮಾರ್ಗದ ಬಸ್ಸಿನ ಆಸನ ಸಂಖ್ಯೆ 17- 18 ರಲ್ಲಿ ಪ್ರಯಾಣಿಕನ ಸೋಗಿನಲ್ಲಿ ವ್ಯಕ್ತಿಯೊಬ್ಬ ಕುಳಿತಿದ್ದ. ಸೀಟ್ ಸಂಖ್ಯೆ 29 -30ರಲ್ಲಿ ಕುಳಿತಿದ್ದ ತಿರುಮುರುಗನ್ ದಂಪತಿ ಬಸ್ ನಿಲ್ಲಿಸಿದಾಗ ಊಟಕ್ಕಾಗಿ ಕೆಳಗಿಳಿದಿದ್ದರು. ಈ ಸಮಯದಲ್ಲಿ ಆರೋಪಿ 5 ಲಕ್ಷ ರೂ. ನಗದು ಕಳವು ಮಾಡಿ, ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ಬಳಿ ಇಳಿದು ಓಡಿಹೋಗುತ್ತಿದ್ದ. ಗಮನಿಸಿದ ಬಸ್ ಚಾಲಕ ಮಂಜುನಾಥ್ ಹಾಗೂ ನಿರ್ವಾಹಕ ಟಿ.ಎನ್. ಸೋಮಪ್ಪ ಆರೋಪಿ ಪ್ರಯಾಣಿಕನನ್ನು ಬೆನ್ನಟ್ಟಿ ಹಿಡಿದರು. ನಂತರ ಪೊಲೀಸ್ ಠಾಣೆಗೊಪ್ಪಿಸಿದ್ದಾರೆ. ಹಣ ಕಳೆದುಕೊಂಡಿದ್ದ ತಿರುಮುರುಗನ್ ದಂಪತಿಗೆ ಹಣ ಮರಳಿಸಿದ್ದಾರೆ.
ಅಭಿನಂದನೆ: ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ಸಿಬ್ಬಂದಿಗಯ ಸಮಯ ಪ್ರಜ್ಞೆ, ಧೈರ್ಯ, ಸಾಹಸ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂತಹ ಸಿಬ್ಬಂದಿಯೇ ನಮ್ಮ ಸಂಸ್ಥೆಯ ಹೆಮ್ಮೆ ಮತ್ತು ಗೌರವ. ಈ ಕಾರ್ಯವು ಇತರರಿಗೆ ಮಾದರಿಯಾಗಲಿ. ಸಮಯೋಚಿತ ಸೇವಾ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.
ಎಟಿಎಂ ಯಂತ್ರದಿಂದ ಲಕ್ಷಾಂತರ ರೂ. ದೋಚಿದ ಕಳ್ಳರು: ತುಮಕೂರು ನಗರದ ಹೃದಯ ಭಾಗದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಸೇರಿದ ಎಟಿಎಂ ದೋಚಿರುವ ಕಳ್ಳರು ಸುಮಾರು 2,90,000 ನಗದಿನೊಂದಿಗೆ ಪರಾರಿಯಾಗಿದ್ದಾರೆ. ಎಸ್ಪಿ ಕಚೇರಿ ಪಕ್ಕದಲ್ಲಿ ಇರುವ ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್ ಬಳಸಿ ತುಂಡರಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಧ್ಯರಾತ್ರಿ ಪ್ರಕರಣ ನಡೆದಿದ್ದು, ಬ್ಯಾಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರು ಸಿಸಿಟಿವಿ ಕ್ಯಾಮರಾ ಒಡೆದು ಹಾಕಿದ್ದಾರೆ. ಎನ್‌ಎಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಡಿಕ್ಕಿ, ಬಾಲಕ ಸಾವು: ಸೈಕಲ್ನಲ್ಲಿ ತೆರಳುತ್ತಿದ್ದ ಬಾಲಕನಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಕನಕಪುರ ರಸ್ತೆಯಲ್ಲಿ ನಡೆದಿದೆ. ಮಳವಳ್ಳಿಯ ವಿನುಶ್ ಗೌಡ (10) ಮೃತ ಬಾಲಕ ಎಂದು ಗುರುತಿಸಲಾಗಿದೆ. ಬಸ್ ಚಾಲಕನ ಅಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳವಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.