Breaking News

ಹಾವೇರಿಯಲ್ಲಿ ಪತ್ನಿ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ

Spread the love

ಹಾವೇರಿ: ಅವರಿಬ್ಬರದು ನಲವತ್ತು ವರ್ಷಗಳ ದಾಂಪತ್ಯ.

ಆದರೆ, ಈ ದಾಂಪತ್ಯದಲ್ಲಿ ಅನುಮಾನ ಎಂಬ ಪಿಶಾಚಿ ಮನೆ ಮಾಡಿತ್ತು. ನಿರಂತರವಾಗಿ ಪತಿ ಮತ್ತು ಪತ್ನಿಯ ನಡುವೆ ಜಗಳವಾಗುತ್ತಿತ್ತು. ಅನೇಕ ಬಾರಿ ರಾಜಿ ಮಾಡಿಸುತ್ತಿದ್ದ ಗ್ರಾಮಸ್ಥರು, ಅವರಿಬ್ಬರ ಜಗಳ ಕಂಡು ಬೇಸತ್ತು ಹೋಗಿದ್ದರು.

ಮಂಗಳವಾರ ಸಂಜೆ ಗಂಡ, ಹೆಂಡ್ತಿ ನಡುವೆ ಮತ್ತೆ ಜಗಳ ನಡೆದಿದೆ. ಪ್ರಕರಣ ಹಾವೇರಿ ಗ್ರಾಮಾಂತರ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಇಬ್ಬರಿಗೂ ಬುದ್ಧಿ ಮಾತು ಹೇಳಿದ ಅಧಿಕಾರಿಗಳು ರಾಜಿ ಮಾಡಿಸಿ ಕಳುಹಿಸಿದ್ದರು. ಅಲ್ಲದೇ ಪತಿ ಸ್ವಲ್ಪ ಸಿಟ್ಟಿನಲ್ಲಿದ್ದಾನೆ, ತವರು ಮನೆಗೆ ಹೋಗಿ ಎಂದು ಅವರು ಮಹಿಳೆಗೆ ತಿಳಿಸಿದ್ದರು. ಅವರ ಮಾತು ಕೇಳದೆ ಮಹಿಳೆ ರಾತ್ರಿ ಗಂಡನ ಮನೆಗೆ ಬಂದಿದ್ದಾಳೆ. ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ. ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡು ಇಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಪತಿ ಮಾರಕಾಸ್ತ್ರದಿಂದ ಪತ್ನಿಯ ಕುತ್ತಿಗೆ ಹೊಡೆದಿದ್ದಾನೆ. ಪತ್ನಿ ಸಾಯುತ್ತಿದ್ದಂತೆ ಪತಿ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

ಅಂದ ಹಾಗೆ, ಈ ಘಟನೆ ನಡೆದಿರುವುದು ಹಾವೇರಿ ತಾಲೂಕು ಸಂಗೂರು ಗ್ರಾಮದಲ್ಲಿ. ಪ್ರಭಾಕರ (65) ಹಾಗೂ ದ್ರಾಕ್ಷಾಯಿಣಿ (60) ಮೃತರು. ಪತ್ನಿ ಮೇಲೆ ಅನುಮಾನಪಡುತ್ತಿದ್ದ ಪತಿ ನಿತ್ಯ ಜಗಳವಾಡುತ್ತಿದ್ದನು. ಇದೀಗ ಅತಿಯಾದ ಸಂಶಯ ದಂಪತಿಯನ್ನು ಬಲಿ ಪಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು. ದ್ರಾಕ್ಷಾಯಿಣಿಗಾಗಿ ಸಹೋದರ ಹೊಸ ಮನೆ ಕಟ್ಟಿಸಿ ಕೊಟ್ಟಿದ್ದಾನೆ. ಆದರೆ, ಜಮೀನಿನ ಮನೆಯಲ್ಲಿ ಇರುತ್ತಿದ್ದ ಪತಿ, ಪತ್ನಿ ಅಲ್ಲಿಯೇ ಶವವಾಗಿದ್ದಾರೆ. 3.5 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಮನೆ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಅದರಲ್ಲಿ ವಾಸ ಮಾಡುವ ಸೌಭಾಗ್ಯ ನಮ್ಮ ಅಕ್ಕ- ಮಾವನಿಗೆ ಇಲ್ಲ ಎಂದು ದ್ರಾಕ್ಷಾಯಿಣಿ ಸಹೋದರ ಸಣ್ಣಬಸಪ್ಪ ಕಣ್ಣೀರು ಹಾಕಿದರು.

 

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ಕೂಡಾ ಪರಿಶೀಲನೆ ನಡೆಸಿದ್ದಾರೆ. ದಂಪತಿಯ ಸಾವಿನ ಪ್ರಕರಣದ ಸುದ್ದಿ ತಿಳಿದ ಸಂಗೂರು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಈ ಕುರಿತಂತೆ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಂಪತಿಗೆ ಇದ್ದ ಒಬ್ಬ ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ