ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಹಿರಿಯ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರ ಪತ್ನಿ ರಿಚಾ ಸಕ್ಸೇನಾ ಅವರಿಗೆ ಜಾರಿ ನಿರ್ದೇಶನಾಲ(ಇಡಿ) ಜಾರಿ ಮಾಡಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದು ಪಡಿಸಿದೆ.
ಜಾರಿ ನಿರ್ದೇಶನಾಲಯ ಜಾರಿ ಮಾಡಿದ್ದ ಸಮನ್ಸ್ನ್ನು ಪ್ರಶ್ನಿಸಿ ರೀಚಾ ಸಕ್ಸೇನಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ ಆರೋಪಿಯನ್ನು ಖುಲಾಸೆಗೊಳಿಸಿದ ಬಳಿಕ ಪ್ರಕ್ರಿಯೆ ಮುಕ್ತಾಯಗೊಳಿಸುವುದನ್ನು ಸುಪ್ರೀಂ ಕೋರ್ಟ್ ಸಹ ಪರಿಗಣಿಸಿದೆ. ಖುಲಾಸೆ ಪ್ರಕರಣದಲ್ಲಿ ಆರೋಪಿಯ ವಿರುದ್ಧ ವಿಚಾರಣೆ ನಡೆಸುವುದಿಲ್ಲ.
ಹೀಗಾಗಿ, ಬಿ ವರದಿ ಒಪ್ಪಿಕೊಂಡು ಪ್ರಕ್ರಿಯೆ ಮುಕ್ತಾಯಗೊಳಿಸುವುದು ಮತ್ತು ಅಂಥ ಒಪ್ಪಿಗೆ ಅಂತಿಮವಾದಾಗ ಪ್ರಕ್ರಿಯೆ ವಜಾ ಆಗಿದ್ದು, ಖುಲಾಸೆಯಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ರಿಚಾ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಜಾರಿ ಮಾಡಿರುವ ಪ್ರಕ್ರಿಯೆಯು ವಜಾಕ್ಕೆ ಅರ್ಹವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು ? ಹುಬ್ಬಳ್ಳಿಯಲ್ಲಿನ ಕ್ರಿಕೆಟ್ ಬೆಟ್ಟಿಂಗ್ ಆರೋಪ ಸಂಬಂಧ ಇಬ್ಬರು ಬುಕ್ಕಿಗಳು ನೀಡಿದ ಮಾಹಿತಿಯನ್ನು ಆಧರಿಸಿ ಭಾರತೀಯ ದಂಡ ಸಂಹಿತೆ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯಿದೆಯ ವಿವಿಧ ಸೆಕ್ಷನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ರಿಚಾ ಸಕ್ಸೇನಾ ಅವರನ್ನು ಆರೋಪಿಯನ್ನಾಗಿಸಲಾಗಿತ್ತು.
ಈ ಹಿನೆಲೆಯಲ್ಲಿ ಶೋಧ ನಡೆಸಲಾಗಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 13(1)(ಇ) ಮತ್ತು 13(2) ಹಾಗೂ ಐಪಿಸಿ ಸೆಕ್ಷನ್ 120ಬಿ ಅಡಿ ರಿಚಾ ಸಕ್ಸೇನಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿತ್ತು. ರಿಚಾ ಸಕ್ಸೇನಾ ಅವರ ಮನೆಯಲ್ಲಿ 4.7 ಕೋಟಿ ರೂಪಾಯಿ, 2.5 ಕೆ ಜಿ ಬಂಗಾರ ಮತ್ತು ವಜ್ರದ ಆಭರಣಗಳು ದೊರೆತಿದ್ದವು ಎಂದು ಆರೋಪಿಸಲಾಗಿತ್ತು.