ಸಾಂಗ್ಲಿ(ಮಹಾರಾಷ್ಟ್ರ): ನೀವು ಸಿನಿಮಾಗಳಲ್ಲಿ ನೋಡಿರಬಹುದು.
ಮುಸುಕುಧಾರಿ ಪೊಲೀಸ್ ಅಧಿಕಾರಿಗಳ ರೂಪದಲ್ಲಿ ಚಿನ್ನದಂಗಡಿಗೆ ನುಗ್ಗುವ ಗುಂಪು ಜನರನ್ನು ಆಯುಧ, ಬಂದೂಕಿನಿಂದ ಬೆದರಿಸಿ ಚಿನ್ನಾಭರಣ ಕಳ್ಳತನ ಮಾಡುತ್ತಾರೆ. ಅಂಥದ್ದೇ ಪಕ್ಕಾ ಸಿನಿಮ್ಯಾಟಿಕ್ ರೀತಿಯ ದರೋಡೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜೂನ್ 4 ರಂದು ನಡೆದಿದೆ. 14 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದು, ಪ್ರಕರಣ ದಾಖಲಾಗಿದೆ.
ಖತರ್ನಾಕ್ ಕಳ್ಳರ ಕೈಚಳಕ: ಮಹಾರಾಷ್ಟ್ರದ ಸಾಂಗ್ಲಿ ನಗರದಲ್ಲಿ(ಜೂನ್ 4) ಭಾನುವಾರ ಹಾಡಹಗಲೇ 7 ಜನರಿದ್ದ ದರೋಡೆಕೋರರ ತಂಡವೊಂದು ಮೀರಜ್ ರಸ್ತೆಯಲ್ಲಿರುವ ರಿಲಯನ್ಸ್ ಆಭರಣ ಮಳಿಗೆಗೆ ನುಗ್ಗಿದೆ. ಮಾರಕಾಸ್ತ್ರ, ಬಂದೂಕುಗಳನ್ನು ಹೊಂದಿದ್ದ ದುಷ್ಕರ್ಮಿಗಳು ಅಂಗಡಿಯಲ್ಲಿದ್ದ ಎಲ್ಲ ಜನರನ್ನು ಬೆದರಿಸಿ 14 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ವಿಚಿತ್ರ ಅಂದರೆ, ಶಸ್ತ್ರಸಜ್ಜಿತ ದರೋಡೆಕೋರರು ಪೊಲೀಸ್ ಸಮವಸ್ತ್ರದಲ್ಲಿದ್ದರು. ಅಧಿಕಾರಿಗಳಂತೆ ವೇಷ ಧರಿಸಿ ಬಂದು ಕಳ್ಳತನ ಮಾಡಿದ್ದಾರೆ. ಜನರಲ್ಲಿ ಭಯ ಹುಟ್ಟಿಸಲು ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ್ದಾನೆ. ಇದರಿಂದ ಅಂಗಡಿಯ ಕಿಟಕಿ ಗಾಜು ಪುಡಿಪುಡಿಯಾಗಿದೆ. ಭಯಗೊಂಡ ಗ್ರಾಹಕನೊಬ್ಬ ಅಲ್ಲಿಂದ ಓಡಿ ಹೋಗಲು ಯತ್ನಿಸಿದಾಗ ಒಡೆದ ಗಾಜಿನ ಮೇಲೆ ಬಿದ್ದು ಗಾಯಗೊಂಡಿದ್ದಾರೆ.
ಬಾಯಿ ಮುಚ್ಚಿ ಒತ್ತೆಯಾಳು: ಮೊದಲೇ ಹೇಳಿದ ಹಾಗೆ ಇದು ಪಕ್ಕಾ ಸಿನಿಮೀಯ ಕೃತ್ಯವಾಗಿದೆ. ದರೋಡೆಕೋರರು ಕೊಳ್ಳೆಹೊಡೆಯುವ ಮೊದಲು ಆಭರಣ ಅಂಗಡಿಯಲ್ಲಿದ್ದ ನೌಕರರು ಮತ್ತು ಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ. ಆಭರಣ ಮಳಿಗೆಯ ಸಿಬ್ಬಂದಿ ಮತ್ತು ಗ್ರಾಹಕರ ಬಾಯಿಗೆ ಸೆಲ್ಲೋ ಟೇಪ್ ಅಂಟಿಸಿ, ಕಿರುಚದಂತೆ ತಡೆದಿದ್ದರು. ಅಲ್ಲದೇ, ಬಂದೂಕು ತೋರಿಸಿ ಒತ್ತೆಯಾಳನ್ನಾಗಿ ಮಾಡಿಕೊಂಡಿದ್ದರು. ಈ ವೇಳೆ, ಅಂಗಡಿ ಸಿಬ್ಬಂದಿ ಮತ್ತು ಕೆಲ ಗ್ರಾಹಕರು ಪ್ರತಿಭಟಿಸಿದಾಗ ಬಂದೂಕು ತೋರಿಸಿ ಬೆದರಿಸಿ, ಹಲ್ಲೆ ಮಾಡಿದ್ದಾರೆ.
ನುರಿತ ಖತರ್ನಾಕ್ ಕಳ್ಳರ ತಂಡವೇ ಇದಾಗಿದ್ದು, ತಮ್ಮ ವಿರುದ್ಧ ಯಾವುದೇ ಸಾಕ್ಷಿ ಸಿಗಬಾರದು ಎಂದು ಚಿನ್ನಾಭರಣ ಕೊಳ್ಳೆಹೊಡೆಯುವ ಮೊದಲು ಸಿಸಿಟಿವಿ ಕ್ಯಾಮೆರಾಗಳು ಮತ್ತು ಡಿವಿಆರ್ ಯಂತ್ರವನ್ನು ವಶಕ್ಕೆ ಪಡೆದಿದ್ದರು. ಬಳಿಕ ಅವುಗಳನ್ನು ತಮ್ಮ ಜೊತೆಗೇ ತೆಗೆದುಕೊಂಡು ಹೋಗಿದ್ದಾರೆ. ಏಳರಿಂದ ಎಂಟು ದರೋಡೆಕೋರರು ಕಾರಿನಲ್ಲಿ ಅಂಗಡಿಗೆ ನುಗ್ಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾಹಿತಿ ತಿಳಿದ ಬಳಿಕ, ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ವಿಶ್ರಾಮ್ ಬಾಗ್ ನೇತೃತ್ವದ ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ತೇಲಿ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಹಗಲು ಹೊತ್ತಿನಲ್ಲೇ ನಡೆದ ದರೋಡೆಯ ವಿಷಯ ತಿಳಿದ ಜನರು ರಿಲಯನ್ಸ್ ಜ್ಯುವೆಲ್ಲರಿ ಅಂಗಡಿಯ ಮುಂದೆ ಜಮಾಯಿಸಿದ್ದರು.
ದರೋಡೆಕೋರರನ್ನು ಪತ್ತೆಹಚ್ಚಲು ಹಲವು ಪೊಲೀಸ್ ತಂಡಗಳು ರಚಿಸಲಾಗಿದೆ. ಆರೋಪಿಗಳು ನಗರದಿಂದ ತಪ್ಪಿಸಿಕೊಳ್ಳದಂತೆ ತಡೆಯಲು ಚೆಕ್ಪೋಸ್ಟ್ಗಳಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದೆ. ಚಿನ್ನಾಭರಣದ ಜೊತೆಗೆ ಅಂಗಡಿಯ ಸಿಸಿಟಿವಿಗಳನ್ನು ಕದ್ದೊಯ್ದಿರುವ ಕಾರಣ ದೃಶ್ಯಾವಳಿಗಳ ಲಭ್ಯತೆ ಇಲ್ಲವಾಗಿದೆ. ಹೀಗಾಗಿ ಅಕ್ಕಪಕ್ಕದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.