ಬೆಂಗಳೂರು : ಕಳೆದ ಎರಡ್ಮೂರು ದಿನಗಳಿಂದ ರಾಜ್ಯದ ರಾಜಧಾನಿಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ.
ನಿನ್ನೆ ರಾತ್ರಿ ನಗರದಲ್ಲಿ ಮತ್ತೊಂದು ಹತ್ಯೆಯಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಗನನ್ನೇ ಚಿಕ್ಕಪ್ಪ ಕೊಲೆ ಮಾಡಿರುವ ಘಟನೆ ನಡೆದಿದೆ. ಕೆಂಗೇರಿ ಉಪನಗರದ ಹೊಯ್ಸಳ ಸರ್ಕಲ್ ಸಮೀಪದ ಹ್ಯಾಪಿ ಡೇ ಬಾರ್ ಬಳಿ ಘಟನೆ ನಡೆದಿದೆ. ಕೆಂಗೇರಿಯ ಗಾಂಧಿನಗರ ನಿವಾಸಿ ನವೀನ್ (25) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಂಠಪೂರ್ತಿ ಕುಡಿದು, ಹಳೆ ವೈಷಮ್ಯದ ವಿಚಾರಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆಗೊಳಗಾಗಿದ್ದ ನವೀನ್ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನವೀನ್ ಚಿಕ್ಕಪ್ಪ ಕುಮಾರ್ ಹಾಗೂ ಆತನ ಸಹಚರರಾದ ರಮೇಶ್, ಗುರುಪ್ರಸಾದ್ ಎಂಬಾತನಿಂದ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ. ಕುಮಾರ್ ಕಾಲಿಗೂ ಗಾಯವಾಗಿದ್ದು, ಪರಾರಿಯಾಗಲು ಯತ್ನಿಸಿರುವುದು ಗೊತ್ತಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕೆಂಗೇರಿ ಪೊಲೀಸರು ಘಟನೆ ನಡೆದ ಸ್ವಲ್ಪ ದೂರದಲ್ಲಿ ಗಾಯಗೊಂಡ ಪ್ರಮುಖ ಆರೋಪಿ ಕುಮಾರ್ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ನವೀನ್ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಹಂತಕರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
Laxmi News 24×7