ದಾವಣಗೆರೆ: ಶೀಲ ಶಂಕಿಸಿ ಪತ್ನಿ ಹಾಗೂ ಮಗಳನ್ನು ಕೊಲೆ ಮಾಡಿದ ಅಪರಾಧಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಾಯಕೊಂಡ ಗ್ರಾಮದ ನಾಗರಾಜ ಶಿಕ್ಷೆಗೆ ಗುರಿಯಾದ ಅಪರಾಧಿ. ಶಿಲ್ಪಾ ಹಾಗೂ 2 ವರ್ಷದ ಮಗು ಕೃತಿಕಾ ಕೊಲೆಯಾದವರು.
ನಾಗರಾಜನಿಗೆ 2015ರಲ್ಲಿ ಶಿಲ್ಪಾ ಅವರ ಜೊತೆ ವಿವಾಹವಾಗಿತ್ತು. ಅವರಿಗೆ 2 ವರ್ಷದ ಕೃತಿಕಾ ಎನ್ನುವ ಹೆಣ್ಣು ಮಗುವಿತ್ತು. ನಾಗರಾಜ ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ‘ನೀನು ಎಷ್ಟು ಹೇಳಿದರೂ ಬೇರೆಯವರ ಜೊತೆ ಮಾತನಾಡುತ್ತೀಯಾ’ ಎಂದು ಜಗಳ ತೆಗೆಯುತ್ತಿದ್ದ.
2018ರ ಏ.19ರಂದು ಮುಂಜಾನೆ 5.30ರ ಸಮಯದಲ್ಲಿ ತಂದೆ ಹೊರಗೆ ಹೋಗುವುದನ್ನೇ ಕಾಯುತ್ತಿದ್ದ ನಾಗರಾಜ ಮನೆಯಲ್ಲಿ ಯಾರೂ ಇಲ್ಲದೇ ಇದ್ದುದನ್ನು ಗಮನಿಸಿ, ಬಚ್ಚಲು ಮನೆಗೆ ಹೋಗುತ್ತಿದ್ದ ಶಿಲ್ಪಾ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಅವರನ್ನು ಕೆಳಗೆ ಕೆಡವಿ ಅಲ್ಲಿಯೇ ಮೂಲೆಯಲ್ಲಿ ಇದ್ದ ಹಗ್ಗವನ್ನು ತೆಗೆದುಕೊಂಡು ಕುತ್ತಿಗೆಗೆ ಬಿಗಿದು ಸಾಯಿಸಿದ. ಆ ಬಳಿಕ ಯಾರಿಗೂ ಗೊತ್ತಾಗದಂತೆ ನೇಣು ಹಾಕಿದ.
2 ವರ್ಷದ ಮಗಳು ಕೃತಿಕಾಳ ಜವಾಬ್ದಾರಿ ನನ್ನ ಮೇಲೆ ಬೀಳುತ್ತದೆ ಎಂದು ಆಲೋಚಿಸಿ ಮಗುವನ್ನೂ ನೇಣು ಹಾಕಿ ಕೊಲೆ ಮಾಡಿದ್ದ. ಆನಂತರ ಹಿಂಬಾಗಿಲಿನಿಂದ ಹೊರಹೋಗಿ ಒಳಭಾಗವನ್ನು ಲಾಕ್ ಮಾಡಿ ಸಾಕ್ಷ್ಯ ನಾಶಪಡಿಸಿದ್ದ. ಅಂದಿನ ತನಿಕಾಧಿಕಾರಿ ಗುರುಬಸವರಾಜ್ ಅವರು ಪ್ರಕರಣದ ತನಿಖೆ ಮಾಡಿ ನಾಗರಾಜನ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
Laxmi News 24×7