ನವದೆಹಲಿ: ಈ ಬಾರಿಯ ನೈರುತ್ಯ ಮಾನ್ಸೂನ್ ಮಾರುತಗಳ ಆಗಮನ ವಿಳಂಬವಾಗಲಿದೆ ಎಂದು ಕೇಂದ್ರ ಹವಮಾನ ಇಲಾಖೆ ತಿಳಿಸಿದೆ.
ಮಾನ್ಸೂನ್ ಆರಂಭಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಐಎಂಡಿ, ಜೂನ್ 1 ರ ಬದಲು 5ರಂದು ಮಾನ್ಸೂನ್ ಮಾರುತಗಳು ಕೇರಳ ತಲುಪುವ ಸಾಧ್ಯತೆ ಇದೆ. ಹೀಗಾಗಿ ಮಾನ್ಸೂನ್ ಆರಂಭ ನಾಲ್ಕು ದಿನ ವಿಳಂಬವಾಗಲಿದೆ ಎಂದು ಅಂದಾಜಿಸಿದೆ.

ಕಳೆದ ವರ್ಷವೂ ಜೂನ್ 6ರಂದು ದೇಶದಲ್ಲಿ ಮಾನ್ಸೂನ್ ಆರಂಭವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಜೂನ್ 8 ರಂದು ಎರಡು ದಿನಗಳ ಕಾಲ ತಡವಾಗಿ ಆರಂಭವಾಗಿತ್ತು. ಮಾನ್ಸೂನ್ ವಿಳಂಬದಿಂದ ಕಳೆದ ವರ್ಷದ ಜೂನ್ ನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿತ್ತು ಎಂದು ಹವಮಾನ ಇಲಾಖೆ ತಿಳಿಸಿದೆ.
ಈ ಬಾರಿಯ ಮಾನ್ಸೂನ್ ಉತ್ತಮವಾಗಿರಲಿದ್ದು ದೀರ್ಘಾವಧಿಯಲ್ಲಿ ಸರಾಸರಿ 88 ಸೆಂ.ಮೀ ಮಳೆಯಾಗಬಹುದು. ಇದರಿಂದ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದ ಕೃಷಿ ವಲಯ ಚೇತರಿಕೆ ಕಾಣಲಿದೆ ಎಂದು ಐಎಂಡಿ ತಿಳಿಸಿದೆ.

ಕಳೆದ ವರ್ಷ ಜೂನ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ವಾರ್ಷಿಕ ಮಳೆ ಪ್ರಮಾಣ ಸರಾಸರಿ ಶೇ.75ಕ್ಕಿಂತ ಹೆಚ್ಚಿತ್ತು. ದೇಶದ ಜನಸಂಖ್ಯೆ ಶೇ.60 ರಷ್ಟು ಮಾನ್ಸೂನ್ ಮಳೆ ಮೇಲೆ ಆಧಾರವಾಗಿದ್ದು ಜಾಗತಿಕ ಬೆಳವಣಿಗೆ ಮಳೆ ಮೇಲೆ ಪರಿಣಾಮ ಬೀರಲಿದೆ.
ಮಾನ್ಸೂನ್ ಸಾಮಾನ್ಯವಾಗಿ ಮೇ 20ರ ವೇಳೆಗೆ ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ತಲುಪುತ್ತದೆ ಇದಾದ 10-12 ದಿನಗಳಿಂದ ಭಾರತದಲ್ಲಿ ಮಳೆಗಾಲ ಆರಂಭವಾಗುತ್ತದೆ. ಸದ್ಯ ಮೇ 22ಕ್ಕೆ ಮಾನ್ಸೂನ್ ಅಂಡಮಾನ್ ನಿಕೋಬಾರ್ ತಲುಪಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Laxmi News 24×7