Breaking News

ಗೋಸಾಗಣೆ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣ : ಪುನೀತ್ ಕೆರೆಹಳ್ಳಿ ಸೇರಿ ನಾಲ್ವರಿಗೆ ಜಾಮೀನು

Spread the love

ಬೆಂಗಳೂರು : ಗೋಸಾಗಣೆ ಆರೋಪದಲ್ಲಿ ಇದ್ರೀಶ್ ಪಾಷಾ ಎಂಬುವರು ಅನುಮಾನಾಸ್ಪದ ರೀತಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕುಮಾರ್‌ ಅಲಿಯಾಸ್‌ ಪುನೀತ್ ಕೆರೆಹಳ್ಳಿ ಹಾಗೂ ಇತರೆ ನಾಲ್ವರು ಆರೋಪಿಗಳಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ನೇತೃತ್ವದ ರಜಾಕಾಲದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ಆರೋಪಿಗಳಾದ ಪುನೀತ್ ಕೆರೆಹಳ್ಳಿ, ಗೋಪಿ, ಸುರೇಶ್, ಪವನ್ ಕುಮಾರ್ ಎ.ಎನ್.ಪಿ ಲಿಂಗಪ್ಪ ಎಂಬುವವರಿಗೆ ಜಾಮೀನು ಮಂಜೂರು ಮಾಡಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ವಿಚಾರಣೆ ವೇಳೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ ಶ್ಯಾಮ್, ಮರಣೋತ್ತರ ಪರೀಕ್ಷೆಯಲ್ಲಿ ಇದ್ರೀಶ್ ಪಾಷಾ ಅವರ ದೇಹದಲ್ಲಿ ತರಚಿದ ಗಾಯಗಳ ಬಗ್ಗೆ ಮಾತ್ರ ಉಲ್ಲೇಖವಾಗಿದ್ದು, ಗಂಭೀರ ಗಾಯಗಳ ಬಗ್ಗೆ ಏನೂ ಮಾಹಿತಿ ಇಲ್ಲ.

 

ಪ್ರಕರಣವು ಸಾತನೂರು ಠಾಣೆಯ 100 ಮೀಟರ್ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಎಫ್‌ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಹೀಗಿದ್ದಾಗ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗಲೇಬೇಕಿತ್ತು. ಈಗ ತನಿಖೆ ಪೂರ್ಣಗೊಂಡಿದ್ದು, ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ಪೂರ್ಣಗೊಳಿಸಲಾಗಿದೆ. ತನಿಖೆಯಲ್ಲಿ ಏನೇನು ವಶಪಡಿಸಿಕೊಳ್ಳಬೇಕು ಎಲ್ಲವೂ ಪೂರ್ಣಗೊಂಡಿದೆ. ಇನ್ನು ಆರೋಪ ಪಟ್ಟಿ ಸಲ್ಲಿಕೆಯಾಗಿ ವಿಚಾರಣೆ ನಡೆಯಬೇಕಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ ಜಾಮೀನು ಮಂಜೂರು ಮಾಡಿತು.

ಪ್ರಕರಣದ ಹಿನ್ನೆಲೆ ಏನು? : ಮಾರ್ಚ್ 31ರಂದು ಮಂಡ್ಯದಿಂದ ಬೆಂಗಳೂರಿನತ್ತ ಆಗಮಿಸುತ್ತಿದ್ದ ಜಾನುವಾರು ಸಾಗಣೆ ವಾಹನವೊಂದನ್ನು ಸಾತನೂರು ಪೊಲೀಸ್‌ ಠಾಣೆ ಸಮೀಪ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರು ಅಡ್ಡಗಟ್ಟಿದ್ದರು. ಬಳಿಕ ವಾಹನದಲ್ಲಿ ಇದ್ದವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಏಪ್ರಿಲ್ 1ರಂದು ಬೆಳಗ್ಗೆ ಘಟನಾ ಸ್ಥಳದಿಂದ ಅಂದರೆ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿ ಇದ್ರೀಶ್ ಪಾಷಾ ಅವರ ಶವ ಪತ್ತೆಯಾಗಿತ್ತು.

ಪುನೀತ್ ಮತ್ತು ಸಹಚರರಿಂದ ಹಲ್ಲೆ ನಡೆದಿದೆ ಎಂದು ಪಾಷಾ ಅವರ ಸಹೋದರ ಯೂನುಸ್ ಪಾಷಾ ದೂರು ನೀಡಿದ್ದರು. ಇದನ್ನು ಆಧರಿಸಿ ಆರೋಪಿಗಳ ವಿರುದ್ಧ ಸಾತನೂರು ಠಾಣೆಯಲ್ಲಿ ಐಪಿಸಿ ಸೆಕ್ಷನ್ 302, 324, 341, 504, 506 ಜೊತೆಗೆ 34 ಅಡಿ ಪ್ರಕರಣ ದಾಖಲಾಗಿತ್ತು. ಏಪ್ರಿಲ್ 5ರಂದು ಆರೋಪಿಗಳನ್ನು ರಾಜಸ್ಥಾನದ ಬನ್ಸ್ವಾರ ಬಳಿ ರಾಮನಗರ ಪೊಲೀಸರು ಬಂಧಿಸಿದ್ದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ