24 ವರ್ಷಗಳ ಸುದೀರ್ಘ ದೇಶಸೇವೆ: ತವರಿಗೆ ಮರಳುತ್ತಿರುವ ವೀರ ಯೋಧ ವಿನಾಯಕ ಪಟಗಾರರಿಗೆ ಕುಮಟಾದಲ್ಲಿ ಭವ್ಯ ಸ್ವಾಗತ
ಕುಮಟಾ: ಭಾರತೀಯ ಸೇನೆಯಲ್ಲಿ ಸತತ 24 ವರ್ಷಗಳ ಕಾಲ ದೇಶಸೇವೆಗೈದು ಸೇವಾ ನಿವೃತ್ತಿ ಪಡೆದಿರುವ ತಾಲೂಕಿನ ಕಡೇಕೋಡಿಯ ಹೆಮ್ಮೆಯ ಪುತ್ರ, ಹವಾಲ್ದಾರ್ ಶ್ರೀ ವಿನಾಯಕ ಹೊಸಬಯ್ಯ ಪಟಗಾರ ಅವರು ತಮ್ಮ ಹುಟ್ಟೂರಿಗೆ ಆಗಮಿಸುತ್ತಿದ್ದು, ಅವರಿಗೆ ಅದ್ಧೂರಿ ಸ್ವಾಗತ ಕೋರಲು ಕುಮಟಾ ಸಜ್ಜಾಗಿದೆ.
ದೇಶದ ವಿವಿಧ ಗಡಿಗಳಲ್ಲಿ ಹಾಗೂ ಬೇರೆ ಬೇರೆ ಪ್ರದೇಶಗಳಲ್ಲಿ ಹಗಲಿರುಳೆನ್ನದೆ, ತಮ್ಮ ಪ್ರಾಣದ ಹಂಗು ತೊರೆದು ಮಾತೃಭೂಮಿಯ ರಕ್ಷಣೆಗಾಗಿ ಸೇವೆ ಸಲ್ಲಿಸಿದ ವಿನಾಯಕ ಪಟಗಾರ ಅವರು ಶುಕ್ರವಾರ, ದಿನಾಂಕ 03-04-2026 ರಂದು ಸಂಜೆ 5:00 ಗಂಟೆಗೆ ಕುಮಟಾಗೆ ಬಂದಿಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಟಾದ ಮಾಸ್ತಿಕಟ್ಟೆಯಲ್ಲಿರುವ ಶ್ರೀ ಮಹಾಸತಿ ದೇವಸ್ಥಾನದ ಆವರಣದಲ್ಲಿ ಅವರಿಗೆ ಅದ್ಧೂರಿಯಾಗಿ ಹಾಗೂ ಭವ್ಯವಾಗಿ ಬರಮಾಡಿಕೊಳ್ಳುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಸ್ವಾಗತ ಸಮಾರಂಭವನ್ನು ಮಾಜಿ ಸೈನಿಕರ ಸಂಘ ಕುಮಟಾ (ರಿ.), ಯುವಾ ಬ್ರಿಗೇಡ್ ಕುಮಟಾ, ಜಿಲ್ಲಾ ಗ್ರಾಮ ಒಕ್ಕಲು ಯುವಬಳಗ ಉತ್ತರಕನ್ನಡ, ಕಡೇಕೋಡಿಯ ಸಮಸ್ತ ಗ್ರಾಮಸ್ಥರು ಹಾಗೂ ಕುಮಟಾ ತಾಲೂಕಿನ ಎಲ್ಲಾ ದೇಶಭಕ್ತ ಬಂಧುಗಳು ಜಂಟಿಯಾಗಿ ಆಯೋಜಿಸಿದ್ದಾರೆ.
“ತಮ್ಮ ಯೌವನವನ್ನೆಲ್ಲಾ ದೇಶದ ರಕ್ಷಣೆಗಾಗಿ ಮುಡಿಪಾಗಿಟ್ಟ ವೀರ ಯೋಧನನ್ನು ಸ್ವಾಗತಿಸುವ ಹಾಗೂ ಗೌರವಿಸುವ ಸುವರ್ಣ ಅವಕಾಶ ನಮ್ಮೆಲ್ಲರ ಮುಂದಿದೆ.
ಕುಮಟಾ ತಾಲೂಕಿನ ಸಮಸ್ತ ದೇಶಭಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಹಗಲಿರುಳೆನ್ನದೆ ದೇಶಕ್ಕಾಗಿ ದುಡಿದ ಜೀವಕ್ಕೆ ಕೃತಜ್ಞತೆ ಸಲ್ಲಿಸಬೇಕು ಹಾಗೂ ಸ್ವಾಗತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Laxmi News 24×7