ವಿಜಯಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸೋದು ಕಷ್ಟ. ಅದರಲ್ಲೂ ಅದೃಷ್ಟ ಚೆನ್ನಾಗಿರಬೇಕು ಎಂಬ ಪರಿಸ್ಥಿತಿ ಇದೆ. ಆದರೆ, ಇಲ್ಲೊಬ್ಬ ಪ್ರತಿಭಾನ್ವಿತರೊಬ್ಬರಿಗೆ ಇದುವರೆಗೆ ಒಂದಲ್ಲ, ಎರಡಲ್ಲ, ಬರಬ್ಬೊರಿ ಒಂಬತ್ತು ವಿವಿಧ ಸರ್ಕಾರಿ ನೌಕರಿ ಅರಸಿ ಬಂದಿವೆ!
ಹೌದು, ಸಿಂದಗಿ ತಾಲ್ಲೂಕಿನ ಬಂಟನೂರ ಗ್ರಾಮದ ಕೃಷಿಕರಾದ ಮಲ್ಕಪ್ಪ ಹಳೇಮನಿ ಮತ್ತು ಬಸಮ್ಮ ದಂಪತಿ ಪುತ್ರ ಮಹೇಶ ಹಳೇಮನಿ ಅವರು ಇದುವರೆಗೆ ಬರೆದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ತೇರ್ಗಡೆಯಾಗಿ ಕೆಲಸಕ್ಕೆ ಆಯ್ಕೆಯಾಗಿದ್ದಾರೆ. ಆದರೆ, ಅವೆಲ್ಲವನ್ನು ಬಿಟ್ಟು ಸದ್ಯ ಗೊರವಗುಂಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದುವರೆಗೆ ಒಂಬತ್ತು ಸರ್ಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆಯಾಗಿರುವೆ. ಆದರೆ, ಶಿಕ್ಷಕ ಹುದ್ದೆಯ ಮೇಲಿನ ಪ್ರೀತಿಯಿಂದ ಬೇರೆ ನೌಕರಿಗೆ ಹೋಗಿಲ್ಲ ಎಂದು ಮಹೇಶ ಹಳೇಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಥಮವಾಗಿ 2011ರಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕ ಹುದ್ದೆಗೆ ಆಯ್ಕೆಯಾದೆ. ಹುಬ್ಬಳ್ಳಿಯಲ್ಲಿ 22 ದಿನ ಮಾತ್ರ ಕಾರ್ಯ ನಿರ್ವಹಿಸಿದೆ. ಮೇಲಧಿಕಾರಿಗಳ ವರ್ತನೆಯಿಂದ ಬೇಸತ್ತು ರಾಜೀನಾಮೆ ನೀಡಿ ಹೊರಬಂದೆ ಎಂದು ತಿಳಿಸಿದರು.
2014ರಲ್ಲಿ ಬಿಎಂಟಿಸಿಯಲ್ಲಿ ಸಹಾಯಕ ಸಂಚಾರ ನಿರೀಕ್ಷಕ(ಎಟಿಐ), 2015ರಲ್ಲಿ ನೈರುತ್ಯ ರೈಲ್ವೆಯಲ್ಲಿ ‘ಡಿ’ ಗ್ರೂಪ್ ನೌಕರಿ, 2016ರಲ್ಲಿ ಬೆಸ್ಕಾಂನಲ್ಲಿ ಕಿರಿಯ ಸಹಾಯಕ ಹುದ್ದೆಗೆ ಆಯ್ಕೆಯಾದೆ. ಆದರೆ, ಆ ಯಾವು ಹುದ್ದೆಗೂ ಸೇರ್ಪಡೆಯಾಗಲಿಲ್ಲ ಎಂದರು.
2016ರಲ್ಲೇ ನಮ್ಮೂರ ಸಮೀಪವೇ ಇರುವ ಗೊರವಗುಂಡಿಗೆ ಸರ್ಕಾರಿ ಶಾಲೆಗೆ ಪದವೀಧರ ಪ್ರಾಥಮಿಕ ಶಿಕ್ಷಕ(ಎಜಿಟಿ) ಹುದ್ದೆಗೆ ಆಯ್ಕೆಯಾದೆ. ಸದ್ಯ ಇಲ್ಲಿಯೇ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.
2017ರಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕಿರಿಗಾವಲು ಪ್ರೌಢಶಾಲೆಗೆ ಶಿಕ್ಷಕನಾಗಿ ಆಯ್ಕೆಯಾದೆ. ಆದರೆ, ದೂರವಾಗುತ್ತದೆ ಎಂಬ ಕಾರಣಕ್ಕೆ ಸೇರ್ಪಡೆಯಾಗಲಿಲ್ಲ. ಬಳಿಕ 2017ರಲ್ಲಿ ಎಫ್‌ಡಿಎ ಪರೀಕ್ಷೆಯಲ್ಲೂ ತೇರ್ಗಡೆಯಾಗಿ ಆಯ್ಕೆಯಾದೆ. ನಂತರ 2018ರಲ್ಲಿ ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಹುದ್ದೆಗೆ ಆಯ್ಕೆಯಾದರೂ ಕೆಲಸಕ್ಕೆ ಹೋಗಲಿಲ್ಲ ಎಂದು ತಿಳಿಸಿದರು.
2020ರಲ್ಲಿ ಮೌಲಾನಾ ಆಜಾದ್ ಶಾಲೆಯ ಪ್ರಾಂಶುಪಾಲ ಹುದ್ದೆ ಪರೀಕ್ಷೆ ಬರೆದು ತೇರ್ಗಡೆಯಾದೆ. ಆದರೆ, ಸಂದರ್ಶನದಲ್ಲಿ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಸ್ಪರ್ಧಾ ವಿಜೇತ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಆರು ತಿಂಗಳು ತರಬೇತಿ ಪಡೆದುಕೊಂಡಿದ್ದೇನೆ ಎಂದರು.
ಭವಿಷ್ಯದಲ್ಲಿ ಕೆಎಎಸ್ ಬರೆದು ಆಯ್ಕೆಯಾಗಬೇಕು ಎಂಬ ಗುರಿ ಹೊಂದಿದ್ದೇನೆ. ಅದಕ್ಕೆ ಬೇಕಾದ ತಯಾರಿ ನಡೆಸಿದ್ದೇನೆ ಎಂದು ತಮ್ಮ ಕನಸನ್ನು ಬಿಚ್ಚಿಟ್ಟರು.
ಪ್ರತಿದಿನವೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಓದುತ್ತಿರುತ್ತೇನೆ. ಇದೊಂದು ಹವ್ಯಾಸವಾಗಿದೆ ಎಂದು ಹೇಳಿದರು.
32 ವರ್ಷ ವಯಸ್ಸಿನ ಮಹೇಶ್ ಹಳೇಮನಿ ಅವರು ಒಂದು ವರ್ಷದ ಹಿಂದೆ ಐಶ್ವರ್ಯಾ ಅವರೊಂದಿಗೆ ವಿವಾಹವಾಗಿದ್ದಾರೆ. ಅವರೂ ಸಹ ಎಂಎಸ್ಸಿ(ಗಣಿತ) ಪದವೀಧರರಾಗಿದ್ದಾರೆ. ಇಬ್ಬರೂ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅಧ್ಯಯನ ನಡೆಸಿದ್ದಾರೆ.
ಬಿಎ, ಡಿ.ಇಡಿ, ಬಿ.ಇಡಿ ಹಾಗೂ ಕನ್ನಡ ಎಂಎ ಅಧ್ಯಯನ ಮಾಡಿರುವ ಮಹೇಶ್ ಹಳೇಮನಿ ಅವರು ಸದ್ಯ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂಎ ಇತಿಹಾಸ ಅಧ್ಯಯನ ಮಾಡುತ್ತಿದ್ದಾರೆ.