ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹತ್ತರವಾಟ ಗ್ರಾಮದ ಯುವಕ ಕಿರಣ ಸಣ್ಣಪ್ಪ ಕಮತೆ (29) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 53ನೇ ರ್‍ಯಾಂಕ್ ಹಾಗೂ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದಾರೆ.
ಬೆಳಗಾವಿ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಕಿರಣ, ಸದ್ಯ ಬೆಂಗಳೂರಿನ ಲೋಕೋಪಯೋಗಿ ಇಲಾಖೆ ಮುಖ್ಯ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ.
ಐದು ಬಾರಿ ಪ್ರಿಲಿಮ್ಸ್ ಪಾಸಾಗಿದ್ದರೂ ಮೇನ್ಸ್ ಪರೀಕ್ಷೆಯಲ್ಲಿ ವಿಫಲವಾಗಿದ್ದರು. ಆರನೇ ಬಾರಿಗೆ ಯಶಸ್ಸು ಕಂಡರು. ಇವರ ತಂದೆ ಸಣ್ಣಪ್ಪ ಕಮತೆ ಅವರು ನಿಡಸೋಸಿಯ ಹಿರಾ ಶುಗರ್ಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದು, ತಾಯಿ ರುಕ್ಮಿಣಿ ಗೃಹಿಣಿ. ಸಹೋದರಿ ಕೀರ್ತಿ ಬೆಂಗಳೂರಿನಲ್ಲಿ ಆರ್ಕಿಟೆಕ್ಚರ್ ಆಗಿದ್ದಾರೆ.
1, 2ನೇ ತರಗತಿಯನ್ನು ಮಹಾರಾರಾಷ್ಟ್ರದ ಅಂಬೆಜೋಗಾಯಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ, 3ರಿಂದ 8ನೇ ತರಗತಿಯನ್ನು ಹುಬ್ಬಳ್ಳಿಯ ಎಂ.ಆರ್.ಸಾಖರೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ, 9, 10ನೇ ತರಗತಿ ಗದಗ ಕೆಎಲ್‌ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಪಿಯು ಶಿಕ್ಷಣವನ್ನು ನಿಪ್ಪಾಣಿಯ ಜಿ.ಐ.ಬಾಗೇವಾಡಿ ಕಾಲೇಜಿನಲ್ಲಿ ಮುಗಿಸಿದ್ದಾರೆ.
ಅನುಭವ ಹಂಚಿಕೊಂಡ ಕಿರಣ, ‘2023ರಲ್ಲಿ ನೌಕರಿ ಸೇರಿದ್ದೇನೆ. ಕೆಲಸ ಮಾಡುತ್ತಲೇ ದಿನಕ್ಕೆ 5 ತಾಸು ಓದುತ್ತಿದ್ದೆ. 250 ರ್‍ಯಾಂಕ್ ಒಳಗೆ ಬರುವ ನಿರೀಕ್ಷೆ ಇತ್ತು. ಆದರೆ, 53ನೇ ರ್‍ಯಾಂಕ್ ಬಂದಿದ್ದು ಸಂತಸ ಮೂಡಿಸಿದೆ. ತಂದೆ, ತಾಯಿ ಹಾಗೂ ಪತ್ನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದರು.
Laxmi News 24×7