ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ ಎದುರಾಗಿದೆ. ಕೈಚೀಲ ಖರೀದಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಪೂರ್ವಾನುಮತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ವೇಳೆ ಪರಿಸರ ಸ್ನೇಹಿ ಕೈಚೀಲ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಎಫ್ಐಆರ್ ದಾಖಲು ಮಾಡಲು ಮನವಿ ಮಾಡಲಾಗಿತ್ತು . ಆದರೆ ಪೂರ್ವಾನುಮತಿ ನೀಡಲು ಸರ್ಕಾರ ನಿರಾಕರಿಸಿತ್ತು.
ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ವಕೀಲ ರವಿಚಂದ್ರೇಗೌಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 4 ವಾರದ ಒಳಗೆ ಪೂರ್ವಾನುಮತಿ ನೀಡಲು ಸೂಚನೆ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ಆದೇಶ ನೀಡಿದೆ. ಭ್ರಷ್ಟಾಚಾರ ಆರೋಪ ಬಂದಾಗ ತನಿಖೆ ಅನಿವಾರ್ಯಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ರೋಹಿಣಿ ಸಿಂಧೂರಿ, ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸಬೇಕು ಮತ್ತು ಪ್ಲಾಸ್ಟಿಕ್ ಬಳಕೆಗೆ ಗುಡ್ಬೈ ಹೇಳಿ ಬಟ್ಟೆಯ ಕೈಚೀಲಗಳನ್ನು ಬಳಸಬೇಕು ಎಂದು ಜಿಲ್ಲೆಯ ನಗರ, ಗ್ರಾಮಾಂತರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸಿದ್ದರು.
ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಚೀಲಕ್ಕೆ 13 ರೂ. ಇದ್ದರೆ ಅವುಗಳಿಗೆ ಪ್ರತಿ ಚೀಲಕ್ಕೆ 52 ರೂ. ದರ ನೀಡಿ ಖರೀದಿಸಲಾಗಿದೆ. ಈ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ 7,65,15,816 ಕೋಟಿ ರೂ. ನಷ್ಟವಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಪ್ರಯೋಜನ ನೀಡುವ ಉದ್ದೇಶದಿಂದ ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಈ ಕೈಚೀಲಗಳ ಖರೀದಿಗೆ ಬಳಸಿ ಭ್ರಷ್ಟಾಚಾರ ಎಸಗಲಾಗಿದೆ.
ನಗರಸಭೆ, ಪುರಸಭೆಗಳ ಪೂರ್ವಾನುಮತಿ ಇಲ್ಲದೆ ದುಬಾರಿ ಬೆಲೆಗೆ ಬ್ಯಾಗ್ ಖರೀದಿಸಲಾಗಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ 2021ರ ಅಕ್ಟೋಬರ್ 13ರಂದು ಮೈಸೂರು ಜಿಲ್ಲಾ ಭ್ರಷ್ಟಚಾರ ನಿಗ್ರಹ ದಳಕ್ಕೆ (ಎಸಿಬಿ) ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕೆಂದು ಎನ್.ಆರ್.ರವಿಚಂದ್ರೇಗೌಡ ದೂರು ನೀಡಿದ್ದರು.
Laxmi News 24×7