ಬೆಳಗಾವಿ: ಸ್ವಾಮಿ ವಿವೇಕಾನಂದರು ನಮ್ಮ ದೇಶದ ಯುವಪೀಳಿಗೆ ಯಾವತ್ತಿಗೂ ದಾಸ್ಯ ಮನಸ್ಥಿತಿ ಹೊಂದಬಾರದು ಎಂದು ಬಯಸಿದ್ದರು. ಆದರೆ ಅವರು ಏನು ಆಗಬಾರದೆಂದು ಚಿಂತಿಸಿದ್ದರೋ ಇವತ್ತು ಅದೇ ಆಗುತ್ತಿದ್ದು, ಭಾರತ ಗಡಿ ಹೊರಗೆ ವಿಶ್ವದಲ್ಲೇ ಬಲಾಢ್ಯ ರಾಷ್ಟ್ರವಾಗುತ್ತ ಹೆಜ್ಜೆ ಹಾಕುತ್ತಿದ್ದರೇ, ಗಡಿಯೊಳಗೆ ದಾಸ್ಯ ಮನೋಭಾವದರೆ ತುಂಬಿಕೊಳ್ಳುತ್ತಿದ್ದಾರೆ ಎಂದು ಯುವ ಬ್ರಿಗೇಡ್ ಮುಖ್ಯಸ್ಥ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದ ವಾರ್ಷಿಕೋತ್ಸವ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ‘ವ್ಯಕ್ತಿತ್ವ ನಿರ್ಮಾಣ’ ಕುರಿತ ಯುವ ಸಮ್ಮೇಳನದಲ್ಲಿ ‘ನವತಾರುಣ್ಯದ ಆಶಾಕಿರಣ ಸ್ವಾಮಿ ವಿವೇಕಾನಂದ’ ವಿಷಯವಾಗಿ ಮಾತನಾಡಿದ ಅವರು, ಇಂದಿನ ಯುವಪೀಳಿಗೆ ತನ್ನ ಮಿದುಳನ್ನು ಮೊಬೈಲ್ ಕೈಗೆ ಕೊಟ್ಟು, ಅದು ಹೇಳಿದಂತೆ ನಡೆದುಕೊಳ್ಳುವ ದಾಸರಾಗಿದ್ದಾರೆ. ನಮಗೆ ಗೊತ್ತಿಲ್ಲದೇ ಗುಲಾಮಗಿರಿಯಲ್ಲಿ ಬಾಳುತ್ತಿದ್ದು, ಇದರಿಂದ ಹೊರಬಂದು ಜಾಗೃತ ಭಾರತ ನಿರ್ಮಾಣ ಮಾಡಬೇಕಾದರೆ ಪ್ರತಿಯೊಬ್ಬರು ವಿವೇಕಾನಂದರು ಹಾಕಿಕೊಟ್ಟ ಆದರ್ಶಗಳನ್ನು ಪಾಲಿಸಬೇಕು ಎಂದರು.
ಕ್ಷಣಿಕ ಸುಖದ ಬೆನ್ನುಹತ್ತಿರುವ ಇಂದಿನ ಪೀಳಿಗೆ ಅಂತ್ಯವಿಲ್ಲದ ಸುಖವನ್ನು ಹುಡುಕಬೇಕಿದೆ. ಆದರೆ ಮೊಬೈಲ್ ಸ್ಕ್ರೀನ್ ಹುಡುಕಾಟದಲ್ಲಿಯೇ ಜೀವನದ ಅಮೂಲ್ಯ ಕ್ಷಣವನ್ನು ಹಾಳು ಮಾಡಿಕೊಳ್ಳುತ್ತಿರುವುದು ಕಳವಳಕಾರಿ ಬೆಳವಣಿಗೆ. ಸರಿಯಾದ ವಯಸ್ಸಿನಲ್ಲಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವ ದೃಢ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ನಿಜವಾದ ಅರ್ಥದಲ್ಲಿ ನಮ್ಮ ದೇಶ ಉಜ್ವಲ ಭಾರತವಾಗಬಲ್ಲದು ಎಂದು ಹೇಳಿದರು.
‘ಆಂತರಿಕ ಸಾಮರ್ಥ್ಯದ ಅನ್ವೇಷಣೆ’ ಕುರಿತು ಕಾನ್ಫುರ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಶ್ರದ್ಧಾನಂದಜಿ ಮಾತನಾಡಿ, ಜೀವನದಲ್ಲಿ ಸಫಲತೆ ಮತ್ತು ವಿಫಲತೆ ಸದಾ ಕಾಲ ಜತೆಗೆ ಬರುವ ಬಂಧುಗಳಿದ್ದಂತೆ. ಪದೇ ಪದೇ ಸೋತರೂ ಎದೆಗುಂದದೆ ಪ್ರಯತ್ನಗಳನ್ನು ಮುಂದುವರಿಸಬೇಕು. ಅದಕ್ಕಾಗಿ ನಮ್ಮ ಆಂತರಿಕ ಸಾಮರ್ಥ್ಯದ ಮೇಲೆ ಮೊದಲು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.
ವ್ಯಕ್ತಿತ್ವ ನಿರ್ಮಾಣದಲ್ಲಿ ಧ್ಯಾನದ ಪ್ರಾಮುಖ್ಯ ಮತ್ತು ಅಭ್ಯಾಸ ವಿಧಾನ ಕುರಿತು ಮಾತನಾಡಿದ ಸ್ವಾಮಿ ಮೋಕ್ಷತ್ಮಾನಂದ, ವಿದ್ಯಾರ್ಥಿಗಳಿಗೆ ವಿವಿಧ ಧ್ಯಾನ ಪ್ರಕಾರಗಳನ್ನು ಕಲಿಸಿಕೊಟ್ಟರು. ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
Laxmi News 24×7