ಯಾದಗಿರಿ: ನಮ್ಮ ಕೈ ಬಿಡಬೇಡಿ ಮುಖ್ಯಮಂತ್ರಿಗಳೇ, ನಿಮಗೆ ಕೈ ಮುಗಿದು ಕೇಳಿಕೊಳ್ಳತ್ತೆನೆ ದಯವಿಟ್ಟು ನಮ್ಮ ಅಳಲು ಕೇಳಿ ಅಂತ ಯಾದಗಿರಿ ಜಿಲ್ಲೆಯ ರೈತರೊಬ್ಬರು ತನ್ನ ಅಳಲನ್ನು ತೊಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿದೆ. ಇದರಿಂದ ಹಳ್ಳ-ಕೊಳ್ಳಗಳು ತುಂಬಿ ಹೊಲ ಗದ್ದೆಗಳು ಸೇರಿದಂತೆ ತಗ್ಗು ಪ್ರದೇಶದ ಮನೆಗಳಿ ಮಳೆ ನುಗ್ಗುತ್ತಿವೆ. ಮಳೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತಿದ ಬೆಳೆ ನಾಶವಾಗಿದೆ. ಇದರಿಂದ ಕಂಗಾಲಾಗಿರುವ ಜಿಲ್ಲೆಯ ಶಹಪುರ ತಾಲೂಕಿನ ಕನ್ಯಾಕೊಳ್ಳೂರಿನ ರೈತ ಭೀಮರಾಯಪ್ಪ ತನ್ನ ಹೊಲದ ಪರಿಸ್ಥಿತಿ ವಿವರಿಸಿ ಕೈಮುಗಿದು, ವೀಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಭೀಮರಾಯಪ್ಪ ತನ್ನ 5 ಎಕರೆಯಲ್ಲಿ ಲಕ್ಷಾಂತರ ರೂಪಾಯ ಖರ್ಚು ಮಾಡಿ ಹತ್ತಿ ಬಿತ್ತಿದ್ದರು. ಆದರೆ ಮಳೆಯ ಪ್ರಮಾಣ ಜಾಸ್ತಿಯಾಗಿ ಹಳ್ಳ ತುಂಬಿದ ಹಿನ್ನೆಲೆಯಲ್ಲಿ ಸಾಗರದಂತೆ ಜಮೀನಿಗೆ ನೀರು ನುಗ್ಗಿವೆ. ಇದರಿಂದ ಹತ್ತಿ ಬಿತ್ತನೆ ಮಾಡಿದ ಹೊಲವೆಲ್ಲಾ ಕೊಚ್ಚಿಕೊಂಡು ಹೋಗಿ ಹತ್ತಿ ನೀರುಪಾಲಾಗಿದೆ. ಇದರಿಂದ ಕಂಗಾಲಾಗಿರುವ ರೈತ ಭೀಮರಾಯಪ್ಪ ತನ್ನ ಅಳಲನ್ನು ವೀಡಿಯೋ ಮೂಲಕ ತೊಡಿಕೊಂಡಿದ್ದಾನೆ.