ಬಾಗಲಕೋಟೆ: ಅಭಿವೃದ್ಧಿ ಮಾಡಿದವರಿಗೆ ಜನರು ಮತ ನೀಡಬೇಕು. ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಕೆಲಸ ಮಾಡುವ ಅವಕಾಶವನ್ನು ಬಿಜೆಪಿ ಅಭ್ಯರ್ಥಿ ಚರಂತಿಮಠರಿಗೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಮನವಿ ಮಾಡಿದರು.
ತಾಲೂಕಿನ ಬಸರಿಕಟ್ಟೆ, ಕಡಿವಾಲ ಕಲ್ಲಾಪುರ, ಸುರಳಿಕಲ್ಲ, ಗ್ರಾಮದಲ್ಲಿ ಚರಂತಿಮಠ ಪರ ಮತಯಾಚನೆ ನಡೆಸಿ ಮಾತನಾಡಿದ ಅವರು, ಮನೆಮನೆಗಳಿಂದ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದರೆ ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಹಿಂದೆ ಶಾಸಕರಾಗಿದ್ದವರು ಹಾಗೂ ಪ್ರಸ್ತುತ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರಕ್ಕೆ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಆಸ್ಪತ್ರೆ, ಶಾಲೆ, ರಸ್ತೆ ಸೇರಿದಂತೆ ಮೂಲಸೌಕರ್ಯಗಳಲ್ಲಿ ಗಮನಾರ್ಹ ಸಾಧನೆ ಕಾಣಿಸಿಕೊಂಡಿಲ್ಲ ಎಂದು ಆರೋಪಿಸಿದರು. ವಿಧಾನಸಭೆಯಲ್ಲಿಯೂ ಪ್ರಭಾವಿ ಹಾಜರಾತಿ ಕಾಣಿಸಲಿಲ್ಲ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನಡುವಿನ ಅಧಿಕಾರದ ಸಂಘರ್ಷ, ಭ್ರಷ್ಟಾಚಾರದ ಆರೋಪಗಳು ಹಾಗೂ ಇಲಾಖೆಗಳ ವರ್ಗಾವಣೆಗಳಲ್ಲಿ ಹಣದ ವ್ಯವಹಾರಗಳು ನಡೆಯುತ್ತಿರುವುದನ್ನು ಜನರು ನೋಡುತ್ತಿದ್ದಾರೆ ಎಂದು ಟೀಕಿಸಿದರು.
ಇದೇ ಸಂದರ್ಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಮತದಾರರನ್ನು ಹಣ ನೀಡಿ ಪ್ರಭಾವಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಮೂರು ದಿನ ಕೂಲಿ ಕೊಟ್ಟು ಮತ ಖರೀದಿ ಮಾಡುವ ಪ್ರಯತ್ನ ನಡೆಯುತ್ತಿದ್ದು, ಮತದ ಮೌಲ್ಯ ಮತ್ತು ಗೌರವವನ್ನು ಕಡಿಮೆ ಮಾಡಬಾರದು ಎಂದು ಮನವಿ ಮಾಡಿದರು.
“ನಾಳೆ ಯಾರನ್ನ ಆಯ್ಕೆ ಮಾಡುತ್ತೀರೋ ಅವರ ಬಳಿ ಕೆಲಸ ಕೇಳುವ ನೈತಿಕತೆ ಇರಬೇಕಾದರೆ, ಹಣಕ್ಕೆ ಮತ ಮಾರಬೇಡಿ. ಒಂದು ನಯಾ ಪೈಸಾ ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂಬ ನಿಲುವಿನ ಈರಣ್ಣ ಚರಂತಿಮಠರನ್ನು ಕಮಲ ಗುರುತಿಗೆ ಮತ ನೀಡಿ ಗೆಲ್ಲಿಸಬೇಕು” ಎಂದು ಹೇಳಿದರು.
ಗ್ರಾಮೀಣ ಜೀವನ ಹಸನಾಗಬೇಕು, ರೈತರ ಬದುಕು ಉದ್ದಾರವಾಗಬೇಕು ಮತ್ತು ಬಾಗಲಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ವೀರಣ್ಣ ಚರಂತಿಮಠರನ್ನು ಭರ್ಜರಿ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಅವರು ಕರೆ ನೀಡಿದರು.
ವಿಠ್ಠಲ ಗಾಣಿಗೇರ, ಮಹಾದೇವಪ್ಪ ಯಂಕಣ್ಣನ್ನವರ, ಕೆಂಪನ್ನ ಯಂಕನ್ನವರ,ಸೇರಿದಂತೆ ಅನೇಕರು ಇದ್ದರು.
Laxmi News 24×7