ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‍ಒ) ಜೊತೆಗಿನ ಸಂಬಂಧವನ್ನು ಅಮೆರಿಕ ಕಡಿದುಕೊಂಡಿದ್ದು, ಇನ್ಮುಂದೆ ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ನಾವು ಮನವಿ ಮಾಡಿದ್ದ ಹಾಗೂ ನಮಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನಾವು ಅದರ ಜೊತೆಗಿನ ಸಂಬಂಧವನನ್ನು ಕಡಿತಗೊಳಿಸುವುದಾಗಿ ಮಾಧ್ಯಮಗಳ ಮುಂದೆ ಟ್ರಂಪ್ ಹೇಳಿಕೆ ನೀಡಿದ್ದಾರೆ.ಕೊರೊನಾ ತಡೆಗೆ ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಸಂಪೂರ್ಣವಾಗಿ ಚೀನಾ ಹಿಡಿತದಲ್ಲಿದೆ ಎಂದು 10 ದಿನಗಳ ಹಿಂದೆ ಟ್ರಂಪ್ ಆರೋಪಿಸಿದ್ದರು. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆಯಾಗಿರುವಂತೆ ವರ್ತಿಸುತ್ತಿದೆ. ಹೀಗಾಗಿ ಇನ್ನೂ 30 ದಿನಗಳೊಳಗೆ ತನ್ನ ನಡತೆಯಲ್ಲಿ ಬದಲಾವಣೆ ಕಾಣಿಸದಿದ್ದರೆ ಆರ್ಥಿಕ ನೆರವನ್ನು ಶಾಶ್ವತವಾಗಿ ಕಡಿತಗೊಳಿಸುವುದಾಗಿ ಟ್ರಂಪ್ ಹೇಳಿದ್ದರು.
ವಿಶೇಷ ಅಂದರೆ ಭಾರತ ಡಬ್ಲ್ಯೂಹೆಚ್‍ಒ ಮುಖ್ಯಸ್ಥ ಸ್ಥಾನಕ್ಕೆ ಆಯ್ಕೆ ಆಗಿದ್ದು, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದಾರೆ. ಹಾಂಕಾಂಗ್‍ಗೆ ನೀಡಲಾಗಿದ್ದ ವಿಶೇಷ ಆರ್ಥಿಕ ಸ್ಥಾನಮಾನವನ್ನು ಟ್ರಂಪ್ ವಾಪಸ್ ಪಡೆದಿದ್ದು, ಚೀನಾದಿಂದ ಬರುವವರ ಮೇಲೆ ಇನ್ನಷ್ಟ ನಿರ್ಬಂಧಗಳನ್ನು ಹೇರಿದ್ದಾರೆ.