Breaking News

ಉದ್ಯೋಗ ಭರ್ತಿಯಾಗದ್ದಕ್ಕೆ ಬಿಜೆಪಿ ಕಾರಣ – ನಾವು 40 ಸಾವಿರ ನೇಮಕಾತಿ ಮಾಡಿದ್ದೇವೆ: ಸಿಎಂ

Spread the love

ಬೆಂಗಳೂರು: ಬಿಜೆಪಿ ಸರ್ಕಾರದ  ಅವಧಿಯಲ್ಲಿ ನೇಮಕ ನಡೆಯದ ಕಾರಣ ನಾವು ಅಧಿಕಾರಕ್ಕೆ ಬರುವಾಗಲೇ 2.64 ಲಕ್ಷ ಉದ್ಯೋಗ ಖಾಲಿಯಿದ್ದವು. ಕಳೆದ ಎರಡೂವರೆ ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು  ನಡೆಸಲಾಗಿದೆ ಎಂದು ಎಂದು ಸಿಎಂ ಸಿದ್ದರಾಮಯ್ಯ  ಹೇಳಿದ್ದಾರೆ.

ಧಾರವಾಡದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್‌ ಮಾಡಿ ತಮ್ಮ ಸರ್ಕಾರವನ್ನು ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಅನುಭವಿಸುತ್ತಿರುವ ಆತಂಕ, ನಿರಾಶೆ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಉದ್ಯೋಗಕ್ಕಾಗಿ ಸಲ್ಲಿಸುವ ಪ್ರತಿ ಅರ್ಜಿಯ ಹಿಂದೆ ಒಂದು ಕನಸಿರುತ್ತದೆ, ಕುಟುಂಬದ ನಿರೀಕ್ಷೆ, ವರ್ಷಗಳ ಕಠಿಣ ಪರಿಶ್ರಮ ಮತ್ತು ನಾಡಿಗಾಗಿ ಸೇವೆ ಸಲ್ಲಿಸುವ ಆಕಾಂಕ್ಷೆ ಇರುತ್ತದೆ. ಯುವಜನರ ಆತಂಕ – ಅಹವಾಲುಗಳು ನನ್ನನ್ನು ತಲುಪಿದೆ. ಅವರ ಭವಿಷ್ಯ ನಮಗೂ ಅತ್ಯಂತ ಮಹತ್ವದ್ದಾಗಿದೆ.

ನಾವು ಅಧಿಕಾರಕ್ಕೆ ಬಂದಾಗ 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಇದು ಒಂದೆರೆಡು ದಿನಗಳಲ್ಲಿ ಸೃಷ್ಟಿಯಾದುದಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ಸೂಕ್ತ ಯೋಜನೆಯನ್ನು ರೂಪಿಸದಿರುವುದರಿಂದ ಇಷ್ಟು ದೊಡ್ಡ ಸಂಖ್ಯೆಯ ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ವಿರೋಧ ಪಕ್ಷದ ನಾಯಕರು ನಿರಪರಾಧಿ ವಿದ್ಯಾರ್ಥಿಗಳಿಗೆ ತಪ್ಪು ಮಾರ್ಗದರ್ಶನ ಮಾಡಿ ತಮ್ಮ ರಾಜಕೀಯ ಸ್ವಾರ್ಥದ ಈಡೇರಿಕೆಗಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ.

ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಜನರನ್ನು ಉಜ್ವಲ ಭವಿಷ್ಯದ ಕಡೆ ಯೋಚಿಸಲು ಪ್ರೇರೇಪಿಸುವ ಬದಲು, ಅವರ ಮೂಲಕ ಅಶಾಂತಿಯನ್ನು ಉಂಟುಮಾಡಲು ಹೊರಟಿರುವ ವಿಪಕ್ಷ ನಾಯಕರ ನಡೆ ಖಂಡನೀಯ.

ಇಂದಿನ ಈ ದುಸ್ಥಿತಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದರೆ 2019ರಿಂದ 2023ರವರೆಗಿನ ನೇಮಕಾತಿಯಲ್ಲಿ ನಡೆದ ಅಕ್ರಮಗಳು ಮತ್ತು ಭ್ರಷ್ಟಾಚಾರಗಳು ಕಾರಣ. ಇದು ಯುವಜನರು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದ್ದು ಮಾತ್ರವಲ್ಲ, ದೊಡ್ಡ ಪ್ರಮಾಣದ ಖಾಲಿ ಹುದ್ದೆಗಳ ಸೃಷ್ಟಿಗೆ ಕಾರಣವಾಯಿತು. ನಮ್ಮ ಸರ್ಕಾರ ನೇಮಕಾತಿ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ಬದ್ಧವಾಗಿದೆ.

ಇದೇ ವೇಳೆ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿದ್ದ ಕಾರಣದಿಂದ ಹಲವು ನೇಮಕಾತಿ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಸಂವಿಧಾನದ ಪಾಲನೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾದ ಸರ್ಕಾರವಾಗಿ, ಸಾವಿರಾರು ಅಭ್ಯರ್ಥಿಗಳ ವೃತ್ತಿಜೀವನಕ್ಕೆ ಧಕ್ಕೆ ತರುವಂತಹ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳದೆ ಕಾನೂನಿನ ಚೌಕಟ್ಟಿನೊಳಗೆ ಜವಾಬ್ದಾರಿಯುತವಾಗಿ ವರ್ತಿಸಲು ನಾವು ನಿರ್ಧರಿಸಿದ್ದೇವೆ.

ಈ ರಚನಾತ್ಮಕ ಮತ್ತು ಕಾನೂನು ಅಡೆತಡೆಗಳ ಹೊರತಾಗಿಯೂ, ನಮ್ಮ ಸರ್ಕಾರವು ದೃಢಸಂಕಲ್ಪ ಮತ್ತು ಪ್ರಾಮಾಣಿಕತೆಯಿಂದ ಮುಂದುವರಿದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ನಡಸಲಾಗಿದೆ. ವರ್ಷಗಳ ಕಾಲ ಕಾಯಬೇಕಾದ ಅನೇಕ ಅಭ್ಯರ್ಥಿಗಳ ಕಷ್ಟವನ್ನು ನಾವು ಅರಿತಿದ್ದೇವೆ. ಈ ಕಷ್ಟವನ್ನು ಗುರುತಿಸಿ, ಮುಂಬರುವ ನೇಮಕಾತಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಸಡಿಲಗೊಳಿಸಲಾಗಿದೆ. ಇದರಿಂದ ನೇಮಕಾತಿಯಲ್ಲಾದ ವಿಳಂಬದಿಂದ ಅರ್ಹ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗದಂತೆ ತಡೆಯಲಾಗಿದೆ.

ಉಳಿದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಪಾರದರ್ಶಕ, ವ್ಯವಸ್ಥಿತ ಮತ್ತು ಕಾಲಮಿತಿಯೊಳಗೆ ಇವೆಲ್ಲವನ್ನು ಭರ್ತಿ ಮಾಡಲಾಗುವುದು ಎಂಬ ವಾಗ್ದಾನ ನೀಡುತ್ತಿದ್ದೇನೆ. ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಹುದ್ದೆಗಳ ನೇಮಕಾತಿಗಾಗಿ ಎಲ್ಲಾ ಅಗತ್ಯ ಆಡಳಿತಾತ್ಮಕ ಮತ್ತು ನೀತಿ ನಿರೂಪಣೆ ಮಾನದಂಡಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರೀ ಸಂಖ್ಯೆಯಲ್ಲಿ ಖಾಲಿ ಹುದ್ದೆಗಳು ಬಾಕಿ ಉಳಿಯದಂತೆ ತಡೆಯಲು ನೇಮಕಾತಿ ಸಂಸ್ಥೆಗಳನ್ನು ಬಲಪಡಿಸಲಾಗುತ್ತಿದೆ.

ಇದು ಕೇವಲ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು ಮಾತ್ರವಲ್ಲ; ಆಡಳಿತ ಯಂತ್ರದ ಸಾಮರ್ಥ್ಯವನ್ನು ಮರು ನಿರ್ಮಾಣ ಮಾಡುವುದು, ನೇಮಕಾತಿಯಲ್ಲಿ ನ್ಯಾಯವನ್ನು ಮರುಸ್ಥಾಪಿಸುವುದು ಮತ್ತು ಪ್ರತಿ ಅರ್ಹ ಅಭ್ಯರ್ಥಿಗೆ ಸಮುದಾಯ ಅಥವಾ ಪ್ರದೇಶದ ಬೇಧಭಾವವಿಲ್ಲದೆ ಸಮಾನ ಅವಕಾಶವನ್ನು ಖಚಿತಪಡಿಸುವುದಾಗಿದೆ.


Spread the love

About Laxminews 24x7

Check Also

ರಾಜ್ಯದ ಗ್ರಾಮ ಪಂಚಾಯ್ತಿ ವಾಟರ್ ಮೆನ್, ಪಂಪ್ ಆಪರೇಟರ್, ಮೆಕ್ಯಾನಿಕ್ ಕರ್ತವ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Spread the loveಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಾಟರ್ ಮೆನ್ ಗಳು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಇಲ್ಲಿದೆ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ